ಉಡುಪಿ: ಮಾದಕ ದ್ರವ್ಯ ಆರೋಪಿಗಳ ಪರೇಡ್

Update: 2020-10-28 16:35 GMT

ಉಡುಪಿ, ಅ.28: ಜಿಲ್ಲೆಯಲ್ಲಿ ಮಾದಕ ವಸ್ತುವಿನ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ 72 ಮಂದಿ ಆರೋಪಿಗಳ ಪರೇಡ್‌ನ್ನು ಇಂದು ಬೆಳಗ್ಗೆ ನಗರದ ಚಂದು ಮೈದಾನದಲ್ಲಿ ನಡೆಸಲಾಯಿತು.

ಪರೇಡ್‌ನಲ್ಲಿ ಬೈಂದೂರು ಠಾಣಾ ವ್ಯಾಪ್ತಿಯಿಂದ ಇಬ್ಬರು, ಕುಂದಾಪುರ ಠಾಣಾ ವ್ಯಾಪ್ತಿಯಿಂದ 18 ಮಂದಿ, ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ನಾಲ್ವರು, ಕೋಟ ಠಾಣಾ ವ್ಯಾಪ್ತಿಯಿಂದ ಇಬ್ಬರು, ಉಡುಪಿ ನಗರ ಠಾಣಾ ವ್ಯಾಪ್ತಿಯಿಂದ 12 ಮಂದಿ, ಮಲ್ಪೆ ಠಾಣಾ ವ್ಯಾಪ್ತಿ ಯಿಂದ ಐವರು, ಮಣಿಪಾಲ ಠಾಣಾ ವ್ಯಾಪ್ತಿಯಿಂದ 16 ಮಂದಿ, ಸೆನ್ ಠಾಣಾ ವ್ಯಾಪ್ತಿಯಿಂದ ಇಬ್ಬರು, ಕಾರ್ಕಳ ನಗರ ಠಾಣಾ ವ್ಯಾಪ್ತಿಯಿಂದ ಇಬ್ಬರು, ಪಡುಬಿದ್ರಿ ಠಾಣಾ ವ್ಯಾಪ್ತಿಯಿಂದ ಐವರು, ಕಾಪು ಠಾಣಾ ವ್ಯಾಪ್ತಿಯಿಂದ 3 ಮಂದಿ ಹಾಗೂ ಹಿರಿಯಡ್ಕ ಠಾಣಾ ವ್ಯಾಪ್ತಿಯಿಂದ ಒಬ್ಬ ಸೇರಿ ಒಟ್ಟು 72 ಮಂದಿ ಆರೋಪಿಗಳು ಪರೇಡ್‌ನಲ್ಲಿ ಹಾಜರಿದ್ದರು.

ಪರೇಡ್‌ನಲ್ಲಿ ಭಾಗವಹಿಸಿದ್ದ ಆರೋಪಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್, ಸಮಾಜದ ಸ್ವಾಸ್ಥವನ್ನು ಕಾಪಾಡುವ ನಿಟ್ಟಿನಲ್ಲಿ ಇನ್ನು ಮುಂದೆ ಇಂತಹ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸದೇ, ಉತ್ತಮ ರೀತಿಯಲ್ಲಿ ಜೀವನ ನಡೆಸುವಂತೆ ಕರೆ ನೀಡಿದರು.

ಇನ್ನು ಮುಂದೆ ಇದೇ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ಅವರು ನೀಡಿದರು. ಮಾದಕ ದ್ರವ್ಯ ಸಾಗಾಟ, ಮಾರಾಟಗಾರರ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿ ನೀಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದು ಎಂದೂ ಅವರು ಭರವಸೆ ನೀಡಿದರು.

ಪರೇಡ್ ವೇಳೆ ಎಸ್ಪಿ ವಿಷ್ಣುವರ್ಧನ್ ಅಲ್ಲದೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ,ಪೊಲೀಸ್ ಉಪವಿಭಾಗಾಧಿಕಾರಿ ಟಿ.ಆರ್. ಜೈಶಂಕರ್, ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಹಾಗೂ ಜಿಲ್ಲೆಯ ಇತರ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News