ಬಂಟ್ವಾಳ ತಾಲೂಕಿನ ಇಬ್ಬರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Update: 2020-10-28 16:41 GMT

ಬಂಟ್ವಾಳ, ಅ.28: ಬಂಟ್ವಾಳ ತಾಲೂಕಿನ ಇಬ್ಬರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಕಥೆಗಾರ ವಲೇರಿಯನ್ ಡಿಸೋಜ (ವಲ್ಲಿ ವಗ್ಗ) ಮತ್ತು ಹೊರನಾಡ ಕನ್ನಡಿಗ, ಸಾಧಕ ಕುಸುಮೋದರ ಶೆಟ್ಟಿ (ಕೆ.ಡಿ.ಶೆಟ್ಟಿ) ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ. 

ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ.ಶೆಟ್ಟಿ)ಯವರು ಭವಾನಿ ಶಿಪ್ಪಿಂಗ್ ಸರ್ವೀಸಸ್ ಇಂಡಿಯಾ ಪ್ರೈ ಲಿ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಜನಪ್ರಿಯರಾಗಿದ್ದಾರೆ. ಬಂಟ್ವಾಳ ತಾಲೂಕಿನ ಚೆಲ್ಲಡ್ಕಗುತ್ತುವಿನವರಾದ ಅವರು ಕೇಪುವಿನ ದ.ಕ. ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಮತ್ತು ಕುಂಡಕೋಳಿ ಅಮೈನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮತ್ತು ಅಡ್ಯನಡ್ಕದ ಜನತಾ ಹೈಸ್ಕೂಲಿನಿಂದ ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿ ಬಳಿಕ ಮುಂಬೈ ವಿವಿಯಿಂದ ಬಿಕಾಂ ಪದವಿ ಪಡೆದವರು. 

ಶಿಪ್ಪಿಂಗ್ ಉದ್ಯಮದಲ್ಲಿ ದೇಶ, ವಿದೇಶಗಳಲ್ಲಿ ಅವರು ಹೆಸರುವಾಸಿ. ಭವಾನಿ ಫೌಂಡೇಶನ್ ಟ್ರಸ್ಟ್ ಮೂಲಕ ಸಮಾಜಸೇವೆಯನ್ನು ಮಾಡುತ್ತಿದ್ದಾರೆ.

ದ.ಕ. ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆಯಾದ ವಲೇರಿಯನ್ ಡಿಸೋಜ ಅವರು ಮೂಲತ: ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದವರಾಗಿದ್ದು, ಕಳೆದ 5೦ ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ. ತನ್ನ 17 ನೇ ವಯಸ್ಸಿನಿಂದ ಸಣ್ಣ ಕಥೆ ಬರೆಯಲು ಆರಂಭಿಸಿದ ಅವರು 56 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 

ಇವರ ನೂರಾರು  ಕೊಂಕಣಿ ಸಣ್ಣಕಥೆ, ಕವನ, ಲೇಖನ, ಅಂಕಣ ಬರಹಗಳು ಪ್ರಕಟವಾಗಿದ್ದು, ಆಯ್ದ ಸಣ್ಣಕಥೆಗಳು ಹಿಂದಿ, ತೆಲುಗು, ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ. ಅವರೇ ಅನುವಾದಿಸಿದ ಅವರ ಕಥೆಗಳು ಹಲವಾರು ಕನ್ನಡ  ದಿನ ಮತ್ತು ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕಥಾ ಸಂಕಲನ, ಕವನ ಸಂಕಲನಗಳು ಪ್ರಕಟವಾಗಿದೆ. ವಿವಿಧ ಕವಿ ಗೋಷ್ಠಿ, ವಿಚಾರಗೋಷ್ಠಿಗಳಲ್ಲಿ  ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. 

ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬ-೨೦೧೯ ಪ್ರಶಸ್ತಿ, ಕೊಂಕಣಿ ಕುಟಾಮ್ ಬಹರೈನ್, ಸಂದೇಶ ಪ್ರತಿಷ್ಠಾನ ಮಂಗಳೂರು ಅವರು  ಸಾಹಿತ್ಯ ಗೌರವ ಪ್ರಶಸ್ತಿ ನೀಡಿದ್ದಾರೆ. ಕರ್ನಾಟಕ ಸರಕಾರದ ವಾರ್ತಾ ಇಲಾಖೆ ಇವರ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News