ದೇವಂಗನಾ ಕಾಲಿಟಾ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2020-10-28 17:00 GMT

ಹೊಸದಿಲ್ಲಿ, ಅ. 28: ಕಳೆದ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ದಿಲ್ಲಿಯ ಈಶಾನ್ಯ ಭಾಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪಿಂಜ್ರಾ ತೋಡ್ ಸಾಮಾಜಿಕ ಹೋರಾಟಗಾರ್ತಿ ದೇವಾಂಗನಾ ಕಾಲಿಟಾ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದಿಲ್ಲಿ ಸರಕಾರ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ದಿಲ್ಲಿ ಸರಕಾರ ಸಲ್ಲಿಸಿದ ಮನವಿ ತಿರಸ್ಕರಿಸಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಪ್ರಭಾವಿ ವ್ಯಕ್ತಿಯಾಗಿರುವುದು ಜಾಮೀನು ನಿರಾಕರಣೆಗೆ ಕಾರಣವಾಗಬಾರದು ಎಂದು ಹೇಳಿದೆ. ದಿಲ್ಲಿ ಸರಕಾರದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಕಾಲಿಟಾ ಅವರು ತುಂಬಾ ಪ್ರಭಾವಶಾಲಿ ವ್ಯಕ್ತಿ. ಈ ಪ್ರಕರಣದಲ್ಲಿ ಅವರು ಏಕೈಕ ಪೊಲೀಸ್ ಸಾಕ್ಷಿ ಎಂದು ಉಚ್ಚ ನ್ಯಾಯಾಲಯ ಹೇಳಿದೆ ಎಂದು ತಿಳಿಸಿದರು. ನ್ಯಾಯಮೂರ್ತಿಗಳಾದ ಆರ್.ಎಸ್. ರೆಡ್ಡಿ ಹಾಗೂ ಎಂ.ಆರ್ ಶಾ ಅವರನ್ನು ಕೂಡ ಒಳಗೊಂಡ ನ್ಯಾಯಪೀಠ, ಪ್ರಭಾವಿ ವ್ಯಕ್ತಿಯಾಗಿರುವುದು ಜಾಮೀನು ನಿರಾಕರಣೆಯ ಕಾರಣವಾಗುವುದು ಹಾಗೂ ಅವರು ಸಾಕ್ಷಿಗಳನ್ನು ತಿರುಚುವುದು ಹೇಗೆ ಎಂದು ರಾಜು ಅವರನ್ನು ಪ್ರಶ್ನಿಸಿದರು. ಕಾಲಿಟಾ ಅವರಿಗೆ ಜಾಮೀನು ಮಂಜೂರು ಮಾಡಿದ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News