ನ.4: ಎಂಡೋಸಲ್ಫಾನ್ ಬಾಧಿತರಿಂದ ಡಿಸಿ ಕಚೇರಿ ಚಲೋ

Update: 2020-10-29 12:26 GMT

ಉಡುಪಿ, ಅ.29: ಹೊಸದಿಲ್ಲಿಯ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಗೆ (ಎನ್ಪಿಆರ್‌ಡಿ) ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗ ವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲೆಯ ಎಂಡೊ ಸಲ್ಫಾನ್ ಬಾಧಿತ ಅಂಗವಿಕಲರು ಹಾಗೂ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇದೇ ನವೆಂಬರ್ 4ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

ಅಲ್ಲದೇ ಇವರು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹ್ ಪ್ರತಿಭಟನೆಯನ್ನೂ ನಡೆಸಲಿದ್ದಾರೆ.

ಕುಂದಾಪುರ ಸಮೀಪದ ನಾಡ ಗ್ರಾಮಪಂಚಾಯತ್ ವ್ಯಾಪ್ತಿಯ ಸೇನಾಪುರ ದಲ್ಲಿ ಜಿಲ್ಲೆಯ ಎಂಡೊಸಲ್ಫಾನ್ ಬಾಧಿತ ಅಂಗವಿಕಲರಿಗಾಗಿ ಪುನರ್ವಸತಿ ಕೇಂದ್ರ ಆರಂಭಿಸಲು ಸುಮಾರು ಐದು ಎಕ್ರೆ ಸರಕಾರಿ ಜಮೀನು ಕಾದಿರಿಸಿ ಹಲವಾರು ವರ್ಷಗಳು ಸಂದರೂ, ಇದುವರೆಗೆ ಈ ಪುನರ್ವಸತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆ ಗೊಂಡಿಲ್ಲ.

ಪುನರ್ವಸತಿ ಕೇಂದ್ರದ ನಿರ್ಮಾಣಕ್ಕೆ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆನ್‌ಲೈನ್ ಮೂಲಕ ಯುಡಿಐಡಿ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅಂಗವಿಕಲರಿಗೆ, ಸರಕಾರಿ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಕೂಡಲೇ ಕಾರ್ಯಾರಂಭ ಮಾಡಿ, ಐಡಿ ಕಾರ್ಡು ಗಳನ್ನು ಮಂಜೂರಾತಿ ಮಾಡಬೇಕು. ಹಾಗೂ ಪುನರ್ವಸತಿ ಕಾರ್ಯಕರ್ತರ (ವಿಆರ್‌ಡಬ್ಲು) ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News