ಉಡುಪಿ ನಗರಸಭೆಯಲ್ಲಿ ಅವ್ಯವಹಾರ ತನಿಖೆಗೆ ಆಗ್ರಹ : ಜಿಲ್ಲಾಧಿಕಾರಿಗೆ ದಸಂಸ ಅಂಬೇಡ್ಕರ್ ವಾದ ಮನವಿ

Update: 2020-10-29 14:12 GMT

ಉಡುಪಿ, ಅ. 29: ಉಡುಪಿ ನಗರಸಭೆಯಲ್ಲಿ ಮೀಸಲು ಹಣ ದುರು ಪಯೋಗ ಮಾಡಿ ಅವ್ಯವಹಾರ ಎಸಗಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಿಂದ ಬಹಿರಂಗವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯು ಅ.28ರಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.

ನಗರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾದ ವಿಮಾ ಸೌಲಭ್ಯದ ಆರೋಗ್ಯ ಕಾರ್ಡನ್ನು ಫಲಾನು ಭವಿಗಳಿಗೆ ವಿತರಿಸದೆ, ಕಚೇರಿಯಲ್ಲಿ ರಾಶಿ ಹಾಕಲಾಗಿದೆ. ಅಲ್ಲದೆ ಮೂಡುಬೆಟ್ಟು ಒಂದೇ ವಾರ್ಡಿನಲ್ಲಿ ಸುಮಾರು 30 ಜನ ಮೃತರ ಹೆಸರಿನಲ್ಲಿ ಪ್ರತಿವರ್ಷ ಈ ಕಾರ್ಡ್‌ನ ಪ್ರೀಮಿಯಂ ಪಾವತಿಸಲಾಗಿದೆ. ಹೀಗೆ ಲಕ್ಷಾಂತರ ರೂಪಾಯಿ ದುರುಪಯೋಗವಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಅದೇ ರೀತಿ ಎಸ್‌ಇಪಿ ಮತ್ತು ಟಿಎಸ್‌ಪಿ ಹಣವನ್ನು ದುರುಪಯೋಗ ಮಾಡ ಲಾಗಿದೆ. ಸುಮಾರು 15 ವರ್ಷಗಳಿಂದ ನಗರಸಭೆಯ ಕಸ ವಿಲೇವಾರಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಪ್ರಶಸ್ತಿಯನ್ನು ಪಡೆ ದಿರುವ ಪರಿಶಿಷ್ಟ ಜಾತಿಯ ಮಹಿಳೆ ಸುಂದರಿ ಪುತ್ತೂರು ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಬಹಳ ದೂರದ ವಸತಿ ಪ್ರದೇಶದ ವಾರ್ಡಿಗೆ ಬದಲಾಯಿಸಿ ಅನ್ಯಾಯ ಎಸಗಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯ ಎರಡು ಇಂದಿರಾ ಕ್ಯಾಂಟೀನ್ನಲ್ಲಿ ಪ್ರತಿ ತಿಂಗಳು ಊಟದ ಮತ್ತು ಉಪಹಾರದ ಬೋಗಸ್ ಬಿಲ್ಲನ್ನು ತಯಾರು ಮಾಡಿ ಹಣ ಲಪಟಾಯಿಸಲಾಗುತ್ತಿದೆ ಎಂದು ದಸಂಸ ಮನವಿಯಲ್ಲಿ ದೂರಿದೆ. ಈ ಕುರಿತು ಲೋಕಾಯುಕ್ತ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೂ ದೂರು ನೀಡಲಾಗಿದೆ.

ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ್ ಬಾಳ್ಕುದ್ರು, ದಲಿತ ನೌಕರರ ಒಕ್ಕೂಟದ ಸಂಚಾಲಕ ರಾಘವೇಂದ್ರ ಬೆಳ್ಳೆ, ಮಹಿಳಾ ಸಂಚಾಲಕಿ ಸುಂದರಿ ಪುತ್ತೂರು, ಶಿವಾನಂದ ಮೂಡುಬೆಟ್ಟು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News