ಗೇರುಬೀಜ ಕಾರ್ಖಾನೆಗಳಲ್ಲಿನ ಕಳವು ಪ್ರಕರಣ: ಇಬ್ಬರು ಬಂಧನ

Update: 2020-10-29 16:04 GMT

ಬ್ರಹ್ಮಾವರ, ಅ. 29: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗೇರು ಬೀಜ ಕಾರ್ಖಾನೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿ ಗಳನ್ನು ಪೊಲೀಸರು ಅ.28ರಂದು ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಿದ್ದಾರೆ.

ದ.ಕ. ಜಿಲ್ಲೆಯ ಪುತ್ತೂರು ಕೆಮ್ಮಿಂಜೆ ದರ್ಬೆಯ ಸೈಯ್ಯದ್ ಮುಹಮ್ಮದ್ ಬಶೀರ್(37) ಹಾಗೂ ಬಂಟ್ವಾಳ ತಾಲೂಕಿನ ಮಿತ್ತೂರು ಕೆದಿಲ ನಿವಾಸಿ ಉಮ್ಮರ್ ಫಾರೂಕ್ (36) ಬಂಧಿತ ಆರೋಪಿಗಳು.

ಹೊಸೂರು ಗ್ರಾಮದ ಕೆಳಕರ್ಜೆಯ ವಿನಾಯಕ ಕ್ಯಾಶು ಗೇರುಬೀಜ ಕಾರ್ಖಾನೆಯಲ್ಲಿ ನಡೆದ ಕಳವು ಯತ್ನದ ಬಗ್ಗೆ ಅ.26ರಂದು ಮತ್ತು ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡುವಿನ ವಿಜಯ ದುರ್ಗಾ ಗೇರು ಬೀಜ ಕಾರ್ಖಾನೆ ಯಲ್ಲಿ ನಡೆದ 1.40ಲಕ್ಷ ರೂ. ಮೌಲ್ಯದ 32 ಗೇರುಬೀಜ ಡಬ್ಬಿ ಕಳವು ಬಗ್ಗೆ ಅ. 27ರಂದು ಪ್ರಕರಣ ದಾಖಲಾಗಿತ್ತು.

ಈ ಎರಡು ಪ್ರಕರಣಗಳು ಹಾಗೂ ಇದೇ ಮಾದರಿಯಲ್ಲಿ ಹೆಬ್ರಿ ಮತ್ತು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳನ್ನು ಬೇಧಿ ಸಲು ಎಸ್ಪಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗ ದರ್ಶನದಂತೆ ಡಿವೈಎಸ್ಪಿ ಜೈಶಂಕರ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನಿರ್ದೇಶನದಂತೆ ಬ್ರಹ್ಮಾವರ ಎಸ್ಸೈ ರಾಘವೇಂದ್ರ ಸಿ. ಅವರ ವಿಶೇಷ ತಂಡವನ್ನು ರಚಿಸಲಾಗಿತ್ತು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು, ಕಳವುಗೈದ 32 ಗೇರುಬೀಜ ಡಬ್ಬ, ಮೂರು ಮೊಬೈಲ್ ಸೇರಿದಂತೆ ಒಟ್ಟು 5.52ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಅ.29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News