ಉತ್ತರಾಖಂಡ ಸಿಎಂ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ತಡೆ

Update: 2020-10-29 16:49 GMT

ಹೊಸದಿಲ್ಲಿ, ಅ.29: ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

2016ರಲ್ಲಿ ರಾವತ್ ಉತ್ತರಾಖಂಡ ಬಿಜೆಪಿ ಉಸ್ತುವಾರಿಯಾಗಿದ್ದ ಸಂದರ್ಭದ (ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲಿನ) ಪ್ರಕರಣ ಇದಾಗಿದೆ. ತನ್ನನ್ನು ಜಾರ್ಖಂಡ್‌ನ ಗೋಸೇವಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರಿಂದ ರಾವತ್‌ರ ಸಂಬಂಧಿಯ ಖಾತೆಗೆ 25 ಲಕ್ಷ ರೂ. ಹಣ ಪಾವತಿಸಿರುವುದಾಗಿ ರಾಂಚಿ ಮೂಲದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ ಎಂದು ಪತ್ರಕರ್ತ ಉಮೇಶ್ ಶರ್ಮ ವರದಿ ಮಾಡಿದ್ದರು. ಇದನ್ನು ಗಮನಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್, ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಿತ್ತು. ಆದರೆ, ರಾವತ್ ಅವರ ಹೇಳಿಕೆ ಅಥವಾ ಅಭಿಪ್ರಾಯ ಪಡೆಯದೆಯೇ ಹೈಕೋರ್ಟ್ ಆದೇಶ ಜಾರಿಗೊಳಿಸಿದೆ. ಆದ್ದರಿಂದ ಆದೇಶಕ್ಕೆ ತಡೆ ನೀಡಬೇಕು ಎಂದು ರಾವತ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸಲಾಗಿಲ್ಲ ಅಥವಾ ಈ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಕಕ್ಷಿದಾರನೆಂದು ಸೇರಿಸಲಾಗಿಲ್ಲ. ಹಠಾತ್ ಆಗಿ ಸಿಬಿಐ ತನಿಖೆಗೆ ಆದೇಶಿಸಿರುವುದು ಆಶ್ಚರ್ಯಕರವಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿ, ತಡೆಯಾಜ್ಞೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News