ಕನ್ನಡತಿ ಉತ್ಸವ- ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ : ನ.6-8ರವರೆಗೆ ವೆಬಿನಾರ್ ಸಮಾವೇಶ

Update: 2020-10-29 16:55 GMT

ಮಂಗಳೂರು, ಅ.29: ‘ಅವಳ ಹೆಜ್ಜೆ’ ಸಂಸ್ಥೆಯ 4ನೇ ವರ್ಷದ ಕನ್ನಡತಿ ಉತ್ಸವದ ಅಂಗವಾಗಿ ‘ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ’ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಸವಾಲುಗಳು ಮತ್ತು ಯಶಸ್ಸುಗಳ ಕುರಿತು ನ.6ರಿಂದ 8ರವರೆಗೆ ವೆಬಿನಾರ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸಮಾವೇಶವು ನ.6ರಿಂದ ಪ್ರತೀದಿನ ಬೆಳಗ್ಗೆ 10ರಿಂದ 12 ಗಂಟೆವರೆಗೆ ಮೂರು ದಿನಗಳವರೆಗೆ ನಡೆಯಲಿದೆ. ವಿವಿಧ ಕ್ಷೇತ್ರದ ಹಲವು ಸಾಧಕಿ ಯರು ನಮ್ಮೆಂದಿಗೆ ಜೊತೆಯಾಗಲಿದ್ದಾರೆ. ತಮ್ಮ ಅನುಭವ, ಅಧ್ಯಯನದ ಮುಖಾಂತರ ಹಲವು ದಿಟ್ಟ ಮಹಿಳೆಯರ ಸಾಧನೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.

ಮೊದಲ ದಿನದ ಸಮಾವೇಶದಲ್ಲಿ ಸಿಂಗಾಪುರದ ಪೇಪಾಲ್ ಸಂಸ್ಥೆಯ ಪ್ರಿನ್ಸಿಪಲ್ ಪ್ರೊಗ್ರಾಮ್ ಮ್ಯಾನೇಜರ್, ಹೊರನಾಡ ಕನ್ನಡತಿ ವೈಶಾಲಿ ಪಾಂಡಿ ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯಅತಿಥಿ ಭಾಷಣ ಮಾಡಲಿದ್ದಾರೆ.

ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ. ಎಚ್.ಎಂ. ಹೇಮಲತಾ ‘ವಲಸೆ ಮಹಿಳೆಯರು’ ಕುರಿತ ವಿಷಯ ಮಂಡಿಸಲಿದ್ದಾರೆ. ವೃತ್ತಿಪರ ಕೌನ್ಸಿಲರ್ ವಂದನಾ ಶಾಸ್ತ್ರಿ ‘ಮಹಿಳೆಯರಲ್ಲಿ ಸಾಮರ್ಥ್ಯದ ಪ್ರೇರಣೆ’ ವಿಷಯವನ್ನು, ಉದಯೋನ್ಮುಖ ಛಾಯಾಗ್ರಾಹಕಿ ನವ್ಯಾ ಕಡಮೆ ‘ಫೋಟೋಗ್ರಫಿ ಜರ್ನಿ’ ವಿಷಯ ಹಂಚಿಕೊಳ್ಳಲಿದ್ದಾರೆ.

ಎರಡನೇ ದಿನ ಬೆಳಗ್ಗಿನ ವೆಬಿನಾರ್‌ನಲ್ಲಿ ಹಾವೇರಿ ಜನಪದ ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ರಾಜೇಶ್ವರಿ ರವಿ ಸಾರಂಗಮಠ, ‘ಸಾಧಿಸುವ ಮನಸ್ಸಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ’ ಎನ್ನುವ ವಿಷಯವನ್ನು, ಬೆಂಗಳೂರಿನ ‘ವಿಸ್ತಾರ ಫೌಂಡೇಶನ್’ನ ಚಿನ್ಮಯೀ ಪ್ರವೀಣ್ ‘ವಾಣಿಜ್ಯೋದ್ಯಮದಲ್ಲಿ ಮಹಿಳೆ’ ಎನ್ನುವ ವಿಷಯವನ್ನು, ‘ಈ ಭಾನುವಾರ’ ಪತ್ರಿಕೆಯ ಸಹ ಸಂಪಾದಕಿ ಕುಶಲ ಸ್ವಾಮಿ ‘ಭಾರತದ ಮಹಿಳಾ ಮುಖ್ಯಮಂತ್ರಿಗಳು’ ವಿಷಯವನ್ನು ಮತ್ತು ಲೇಖಕಿ, ಪತ್ರಕರ್ತೆ ಹಾಗೂ ವೃತ್ತಿಪರ ಕೌನ್ಸಿಲರ್ ಡಿ.ಯಶೋಧಾ ‘ಸೋಲೋ, ಗೆಲುವೋ ಸಾಗುವುದೇ ಹಾದಿ’ ವಿಷಯವನ್ನು ಹಂಚಿಕೊಳ್ಳಲಿದ್ದಾರೆ.

ಮೂರನೇ ದಿನ ಬೆಳಗ್ಗೆ 10 ಗಂಟೆಗೆ ಡಾ.ರೇಣುಕಾ ಮಂದ್ರೂಪ, ಕವಯತ್ರಿ, ಕುಂಚ ಕಲಾವಿದೆ ಶಾಂತಿವಾಸು ಮತ್ತು ಲೇಖಕಿ ಮಮತಾ ಅರಸೀಕರೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರು ‘ದಿಟ್ಟ ಹೆಜ್ಜೆ-ದೇವಿ, ಒಂದು ನಡೆ’, ‘ನಾವು ಬಾಳುವಂತೆ ಜೀವನ’ ಮತ್ತು ‘ಮಹಿಳಾ ಮಾರುಕಟ್ಟೆ ಮತ್ತು ಆತ್ಮವಿಶ್ವಾಸ’ ವಿಷಯಗಳನ್ನು ಕುರಿತಂತೆ ತಮ್ಮ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.

ಕೊರೋನ ಬಿಕ್ಕಟ್ಟಿನ ನಡುವೆಯೂ ದೇಶವನ್ನು ಮುನ್ನೆಡೆಸಿಕೊಂಡು ಹೋದ ನ್ಯೂಜಿಲ್ಯಾಂಡ್ ಪ್ರಧಾನಿ ಜಶಿಂದಾ ಆ್ಯರ್ಡ್ರನ್‌ರಂತಹ ದಿಟ್ಟ ಮಹಿಳೆಯ ನಿದರ್ಶನದೊಂದಿಗೆ ಸ್ಥಳೀಯವಾಗಿ ಸುತ್ತಮುತ್ತಲೂ ಹಲವಾರು ಕ್ಷೇತ್ರದಲ್ಲಿ ಬಂದೆರಗಿದ ಸಮಸ್ಯೆಗಳನ್ನು ಮೆಟ್ಟಿನಿಂತ, ನಾಯಕತ್ವಕ್ಕೆ ಸಾಕ್ಷಿಯಾದ ಹಲವು ಮಹಿಳೆಯರು ಸಹ ಇದ್ದಾರೆ.

ಅವರ ಸಾಧನೆಯ ಬಗ್ಗೆ ಬೆಳಕು ಚೆಲ್ಲುವುದರ ಮೂಲಕ ಸಮಾಜಕ್ಕೆ ಸ್ಫೂರ್ತಿದಾಯಕ ಕಥೆಗಳಿಗೆ ಈ ವರ್ಷದ ಬಿಕ್ಕಟ್ಟಿನಲ್ಲಿ ‘ದಿಟ್ಟಹೆಜ್ಜೆ’ ವೆಬಿನಾರ್ ಸಮಾವೇಶ ವೇದಿಕೆಯಾಗುತ್ತಿದೆ ಎಂಬುದು ಇಡೀ ತಂಡದ ಹೆಮ್ಮೆ ಎಂದು ಅವಳಹೆಜ್ಜೆ ಸಂಸ್ಥೆಯ ಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

 ನೋಂದಣಿ: ವೆಬಿನಾರ್‌ನಲ್ಲಿ ಪಾಲ್ಗೊಳ್ಳಲು https://us02web.zoom.us/webinar/register/1116033554427/WN_9yttF-gOQKuffdZcbsm8FA ಲಿಂಕ್‌ನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅವಳಹೆಜ್ಜೆ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕಿ ರೇಣುಕಾಂಬಿಕೆ (9113659968) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News