'ಪುಣಚ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಒಂದು ತಿಂಗಳಿನಿಂದ ಮೆನೇಜರ್ ಇಲ್ಲ'

Update: 2020-10-29 17:19 GMT

ಬಂಟ್ವಾಳ, ಅ.29: ಪುಣಚ ಗ್ರಾಮದಲ್ಲಿ ಕಳೆದ 37 ವರ್ಷಗಳಿಂದ ಗ್ರಾಹಕರಿಗೆ ಸೇವೆ ನೀಡುತ್ತಿರುವ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ಮೆನೇಜರ್ ಇಲ್ಲದೆ ಇರುವುದರಿಂದ ಸಿಬ್ಬಂದಿ ಉದ್ಧಟತನದಿಂದ ವರ್ತಿಸುತ್ತಿದ್ದು ಖಾತೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇಲ್ಲಿಗೆ ಮೇನೇಜರ್ ಸಹಿತ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಬೇಕೆಂದು ಪುಣಚ ನಾಗರಿಕ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಗುರುವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಕಲಂದರ್ ಶಾಫಿ, 10 ಸಾವಿರ ಕ್ಕಿಂತಲೂ ಅಧಿಕ ಖಾತೆದಾರರನ್ನು ಹೊಂದಿರುವ ಈ ಬ್ಯಾಂಕ್‌ನಲ್ಲಿ ಸಹಸ್ರಾರು ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಬ್ಯಾಂಕ್‌ನಲ್ಲಿ ಈಗ ಒಬ್ಬರು ಕ್ಯಾಷಿಯರ್ ಹಾಗೂ ಒಬ್ಬರು ಆಫೀಸರ್ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಬ್ಯಾಂಕ್‌ಗೆ ಬರುವ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗೆ ಬ್ಯಾಂಕ್ ವತಿಯಿಂದ ಯಾವುದೇ ಅರ್ಜಿ ಫಾರಂ ತುಂಬಿಸಲು ಸಹಕರಿಸುತ್ತಿಲ್ಲ. ವಾರದ ಎರಡು ದಿನಗಳು ಮಾತ್ರ ಎಟಿಎಂನಲ್ಲಿ ಹಣ ಪಡೆಯಲು ಸಾಧ್ಯವಾಗುತ್ತಿದ್ದು ಸರಿಯಾದ ಭದ್ರತೆಯೂ ಇಲ್ಲ‌ ಎಂದು ಹೇಳಿದರು. 

ಮೇನೇಜರ್, ಸಿಬ್ಬಂದಿ ಇಲ್ಲದೆ ಸೊರಗುತ್ತಿರುವ ಹೆಚ್ಚು ವ್ಯವಹಾರವುಳ್ಳ ಗ್ರಾಮೀಣ ಪ್ರದೇಶದ ಬ್ಯಾಂಕ್ ಪುನಶ್ಚೇತನದ ಬಗ್ಗೆ ಸಂಸದರಿಗೆ, ಆರ್‌ಬಿಐ, ಪಿಎಂಒ, ಕೆನರಾ ಬ್ಯಾಂಕ್ ಜಿಎಂ, ಕೆನರಾ ಬ್ಯಾಂಕ್ ಕಸ್ಟಮರ್ ಕೇರ್‌ ಗೆ ಅಹವಾಲು ಸಲ್ಲಿಸಿದರೂ ಯಾರೂ ಸ್ಪಂದನೆ ನೀಡಿಲ್ಲ. ಬ್ಯಾಂಕಿನ ರೀಜನಲ್ ಆಫೀಸರ್ ನಲ್ಲಿ ವಿಚಾರಿಸಿದರೂ ನಿರ್ಲಕ್ಷ್ಯದಿಂದ ಉತ್ತರಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಈ ಎಲ್ಲಾ ಸಮಸ್ಯೆಯಿಂದ ಪುಣಚ್ಚ ಗ್ರಾಮ ಸಹಿತ ಸುತ್ತಮುತ್ತಲಿನ ನಾಲ್ಕಾರು ಗ್ರಾಮಗಳ ಖಾತೆದಾರರು ಕಷ್ಟ ಪಡುವಂತಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಶಾಖೆಯ ಬಾಗಿಲು ತೆರೆಯದಂತೆ ಮುತ್ತಿಗೆ ಹಾಕಲಾಗುವುದು. ರೀಜನಲ್ ಕಚೇರಿಯ ಮುಂದೆ ಬೇಡಿಕೆ ಈಡೇರಿಸುವ ತನಕ ಧರಣಿ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವೆಂಕಟ್ರಮಣ ನಾಯಕ್ ಆಜೇರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News