ಸಹೋದರಿಯರ ಆನ್‌ಲೈನ್ ಕ್ಲಾಸ್‌ಗಾಗಿ ಚಹಾ ಮಾರುತ್ತಿರುವ ಬಾಲಕ

Update: 2020-10-30 06:15 GMT

 ಮುಂಬೈ: ಕೋವಿಡ್-19 ಲಾಕ್‌ಡೌನ್ ಬಳಿಕ ತಾಯಿಯ ಸಂಪಾದನೆಯು ನಿಂತು ಹೋದ ಬಳಿಕ ಕಂಗಾಲಾದ 14ರ ಬಾಲಕ ತನ್ನ ತಾಯಿಗೆ ನೆರವಾಗಲು ಹಾಗೂ ಸಹೋದರಿಯರ ಆನ್‌ಲೈನ್ ಕ್ಲಾಸ್‌ಗೋಸ್ಕರ ಚಹಾ ಮಾರಾಟದ ಕೆಲಸಕ್ಕೆ ಇಳಿದಿದ್ದಾನೆ.

ಮುಂಬೈನ ಬೆಂಡಿ ಬಝಾರ್‌ನ ಅಂಗಡಿಯೊಂದರಲ್ಲಿ ಚಹಾ ಮಾಡಿಕೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಚಹಾ ಮಾರುತ್ತಿರುವ ಬಾಲಕ ಸುಭಾನ್‌ಗೆ ಸ್ವಂತ ಅಂಗಡಿ ಇಲ್ಲ.

ಸುಭಾನ್ ತಂದೆ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಆ ನಂತರ ತಾಯಿಯೊಬ್ಬರೇ ಮನೆಯ ಖರ್ಚುವೆಚ್ಚ ನೋಡಿಕೊಳ್ಳುತ್ತಿದ್ದರು. ಲಾಕ್‌ಡೌನ್‌ನಿಂದ ಶಾಲೆಗಳಲ್ಲೆವೂ ಬಂದ್ ಆಗುವ ಮೊದಲು ಸುಭಾನ್ ತಾಯಿ ಶಾಲಾ ಬಸ್‌ಗಳಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. "ನನ್ನ ಸಹೋದರಿಯರು ಆನ್‌ಲೈನ್ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ನಾನು ಶಾಲೆ ಆರಂಭವಾದ ಬಳಿಕ ನನ್ನ ಶಿಕ್ಷಣ ಮುಂದುವರಿಸುವೆ''ಎಂದು ಮುಂಬೈ ಮಾರುಕಟ್ಟೆ ಪ್ರದೇಶಗಳಲ್ಲಿ ಟೀ ಮಾರುತ್ತಿರುವ ಸುಭಾನ್ ಹೇಳಿದ್ದಾರೆ.

 "ನನ್ನ ತಾಯಿ ಶಾಲಾಬಸ್‌ನ ನಿರ್ವಾಹಕಿಯಾಗಿದ್ದರು. ಶಾಲೆಗಳು ಬಂದ್ ಆಗಿವೆ. ಹೀಗಾಗಿ ನಮಗೆ ಆರ್ಥಿಕ ಸಂಕಷ್ಟ ಎದುರಾಯಿತು. ನಾನು ಬೆಂಡಿಬೆಝಾರ್‌ನಲ್ಲಿ ಚಹಾ ತಯಾರಿಸಿ ನಾಗ್ಪಾಡ, ಬೆಂಡಿಬಝಾರ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತೇನೆ. ದಿನಕ್ಕೆ 300ರಿಂದ 400 ರೂ.ಸಂಪಾದನೆ ಮಾಡುತ್ತೇನೆ. ಸಂಪಾದನೆಯನ್ನು ತಾಯಿಗೆ ನೀಡುತ್ತೇನೆ. ಇದರಿಂದ ಸ್ವಲ್ಪ ಉಳಿತಾಯವಾಗುತ್ತಿದೆ'' ಎಂದು ಶುಭಾನ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ದಿಲ್ಲಿಯ ಮಾಳವೀಯ ನಗರದ ರಸ್ತೆಬದಿಯ ಸ್ಟಾಲ್‌ನಲ್ಲಿ ಆಹಾರ ಮಾರಿ ಜೀವನ ಸಾಗಿಸುತ್ತಿದ್ದ 80ರ ವಯಸ್ಸಿನ ವೃದ್ಧ ದಂಪತಿ ಲಾಕ್‌ಡೌನ್‌ನಿಂದಾಗಿ ಎಷ್ಟು ಕಷ್ಟಪಡುತ್ತಿದ್ದಾರೆ ಎಂಬ ವೀಡಿಯೊ ವೈರಲ್ ಆಗಿ ಈ ವೃದ್ಧ ದಂಪತಿಗೆ ಎಲ್ಲೆಡೆಯಿಂದ ನೆರವಿನ ಮಹಾಪೂರ ಹರಿದುಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News