ಕಾರಿನ ಬಳಕೆ ಬಿಟ್ಟು ಸೈಕಲ್‌ಗಳಲ್ಲಿ ಸವಾರಿ ಮಾಡುವ ಸಮಯ ಬಂದಿದೆ: ಸುಪ್ರೀಂಕೋರ್ಟ್

Update: 2020-10-30 06:45 GMT

ಹೊಸದಿಲ್ಲಿ: ಸುಂದರ ಕಾರುಗಳ ಬಳಕೆ ನಿಲ್ಲಿಸಿ ಸೈಕಲ್‌ಗಳನ್ನು ಬಳಸುವ ಸಮಯ ಬಂದಿದೆ ಎಂದು ನೆರೆಯ ರಾಜ್ಯಗಳಲ್ಲಿ ಬೆಳೆಯ ತ್ಯಾಜ್ಯವನ್ನು ಸುಡುತ್ತಿರುವ ಪರಿಣಾಮ ದಿಲ್ಲಿಯ ಎನ್‌ಸಿಆರ್‌ನಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

 ಬೆಳೆ ತ್ಯಾಜ್ಯ ಸುಡುವುದು ಮಾಲಿನ್ಯಕ್ಕೆ ಏಕೈಕ ಮೂಲವಲ್ಲ ಎಂದು ಕೆಲವು ತಜ್ಞರು ನಮಗೆ ಮಾಹಿತಿ ನೀಡಿದ್ದಾರೆ.ನಿಮ್ಮ ಸುಂದರವಾದ ಕಾರುಗಳನ್ನು ಬಳಸುವುದನ್ನು ನೀವು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ನಿಮ್ಮ ಸೈಕಲ್‌ಗಳನ್ನು ಹೊರ ತೆಗೆಯುವ ಸಮಯ ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ(ಸಿಜೆ ಐ) ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.

  ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಈಗಾಗಲೇ ಸುಗ್ರೀವಾಜ್ಞೆಯನ್ನು ತಂದಿದ್ದು, ಅದನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಯಾರಾದರೂ ಅನಾರೋಗ್ಯಕ್ಕೆೆ ತುತ್ತಾದರೆ ನಿಮ್ಮನ್ನೇ ನಾವು ಜವಾಬ್ದಾರಿಯನ್ನಾಗಿ ಮಾಡುತ್ತೇವೆ ಎಂದು ಜಸ್ಟಿಸ್‌ಗಳಾದ ಎ.ಎಸ್. ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಹಗುರವಾದ ದಾಟಿಯಲ್ಲಿ ಹೇಳಿದೆ.

ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನವಂಬರ್ 6ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News