ಅರ್ಜಿಯನ್ನೇ ಸಲ್ಲಿಸದ ಪತ್ರಕರ್ತ ಉದಯ್ ಆರ್‌ಟಿಐ ಆಯುಕ್ತರಾಗಿ ನೇಮಕ ಸಾಧ್ಯತೆ
ಹೊಸದಿಲ್ಲಿ: ಎರಡು ತಿಂಗಳುಗಳಿಂದ ತೆರವಾಗಿರುವ ನೂತನ ಮಾಹಿತಿ ಆಯುಕ್ತರ ನೇಮಕಾತಿಗೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಅಂತಿಮ ಪಟ್ಟಿ ಸಿದ್ಧತೆಯ ವೇಳೆ 2019ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ಪಾರದರ್ಶಕ ಮಾರ್ಗಸೂಚಿಯನ್ನು ಪಾಲಿಸಲಾಗಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನಿವೃತ್ತ ಭಾರತೀಯ ವಿದೇಶಿ ಸೇವೆ(ಐಎಫ್‌ಎಸ್)ಅಧಿಕಾರಿ ಯಶ್ವರ್ಧನ್ ಕುಮಾರ್ ಸಿನ್ಹಾ ಅವರು ಭಾರತದ ಹೊಸ ಮುಖ್ಯ ಮಾಹಿತಿ ಆಯುಕ್ತ(ಸಿಐಸಿ)ರಾಗಲು ಸಜ್ಜಾಗಿದ್ದಾರೆ ಎಂದು ಸರಕಾರಿ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
ಪತ್ರಕರ್ತ ಉದಯ್ ಮಹೂರ್ಕರ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ನೇಮಕಾತಿಯ ಬಗ್ಗೆ ಅಧಿಕೃತ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ರಾಷ್ಟ್ರಪತಿ ಭವನ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನೇತೃತ್ವದ ಸಮಿತಿಯು ಮಾಹಿತಿ ಹಕ್ಕು ವಾಚ್‌ಡಾಗ್‌ಗೆ ಸದಸ್ಯರುಗಳು ಆಯ್ಕೆ ಮಾಡುತ್ತದೆ.
ಇಂಗ್ಲೆಂಡ್ ಹಾಗೂ ಶ್ರೀಲಂಕಾದ ಮಾಜಿ ಹೈಕಮಿಶನರ್ ಆಗಿದ್ದ ವೈಕೆ ಸಿನ್ಹಾ ಅವರ ಅಧಿಕಾರದ ಅವಧಿಯು 2023ರ ಅಕ್ಟೋಬರ್‌ಗೆ ಮುಗಿಯುವ ನಿರೀಕ್ಷೆ ಇದೆ. ಈಗ ಅವರು ಕೇಂದ್ರ ಮಾಹಿತಿ ಆಯೋಗದ ಐವರು ಮಾಹಿತಿ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದಾರೆ.
ಉದಯ್ ಮಹೂರ್ಕರ್ ಅವರ ನೇಮಕಾತಿಯ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಸಿಐಸಿ ಹುದ್ದೆಗೆ ಅರ್ಜಿ ಸಲ್ಲಿಸಿದ 139 ಜನರಲ್ಲಿ ಹಾಗೂ ಮಾಹಿತಿ ಆಯುಕ್ತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 355 ಜನರಲ್ಲಿ ಈ ನಿರ್ದಿಷ್ಟ ಅಭ್ಯರ್ಥಿಗಳನ್ನು ಅಂತಿಮ ಪಟ್ಟಿಯಲ್ಲಿ ಏಕೆ ಸೇರಿಸಲಾಗಿದೆ ಎಂದು ಆಯ್ಕೆ ಸಮಿತಿಯು ಯಾವುದೇ ಆಧಾರವನ್ನು ನೀಡಿಲ್ಲ . ಇದು ನಮಗೆ ಅಚ್ಚರಿ ಉಂಟು ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಮಹೂರ್ಕರ್ ಅವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂದು ಮೂಲಗಳು ಆರೋಪಿಸಿವೆ.
"ಅವರನ್ನು(ಉದಯ ಮೆಹರ್ಕೂರ್)ಆಕಾಶದಿಂದ ಕೆಳಬೀಳಿಸಲಾಗಿದೆಯೇ. ಅವರು ಆಡಳಿತ ಪಕ್ಷ ಹಾಗೂ ಅದರ ಸಿದ್ದಾಂತದ ಮುಕ್ತ ಬೆಂಬಲಿಗರಾಗಿದ್ದಾರೆ. ಅವರಿಗೆ(ಸಿನ್ಹಾ)ದೇಶೀಯ ಅನುಭವದ ಕೊರತೆ ಇದೆ''ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.