×
Ad

ಆರ್​ಟಿಐ ಕಾರ್ಯಕರ್ತರ ವೈಯಕ್ತಿಕ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಹಾಕಿದ್ದ ಕೇಂದ್ರ ಸಚಿವಾಲಯಕ್ಕೆ ಹೈಕೋರ್ಟ್ ತರಾಟೆ

Update: 2020-10-30 17:56 IST

ಮುಂಬೈ: ದೇಶದ 4,474 ಮಾಹಿತಿ ಹಕ್ಕು ಕಾರ್ಯಕರ್ತರ ವೈಯಕ್ತಿಕ ಮಾಹಿತಿಗಳನ್ನು ತನ್ನ ವೆಬ್‍ಸೈಟ್‍ನಲ್ಲಿ ತೀರಾ ಇತ್ತೀಚಿಗಿನ ತನಕ ಒದಗಿಸಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಬಾಂಬೆ ಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

ತನ್ನ ಖಾಸಗಿ ಮಾಹಿತಿಯನ್ನು ಸಚಿವಾಲಯದ ವೆಬ್ ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದನ್ನು ಪ್ರಶ್ನಿಸಿ ಆರ್​ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆ ವೇಳೆ  ಹೈಕೋರ್ಟ್ ಸಚಿವಾಲಯದ ಕ್ರಮದ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಈ ಖಾಸಗಿ ಮಾಹಿತಿಗಳನ್ನು ತೆಗೆದು ಹಾಕಬೇಕೆಂಬ 2016ರ ಆಫೀಸ್ ಮೆಮರಾಂಡಂ ಕುರಿತು ಇತ್ತೀಚೆಗೆ ನೆನಪಾದ ಹಿನ್ನೆಲೆಯಲ್ಲಿ ಸಚಿವಾಲಯ ಆ ಮಾಹಿತಿಗಳನ್ನು ತೆಗೆದು ಹಾಕಿತ್ತು.

"ಯಾರಾದರೂ ಈ ಕುರಿತು ಗಮನಿಸಿದ್ದೀರಾ? ಕರ್ತವ್ಯಲೋಪವಾಗಿದೆಯೇ?'' ಎಂದು ಜಸ್ಟಿಸ್ ನಿತಿನ್ ಜಾಮ್ದಾರ್ ಹಾಗೂ ಮಿಲಿಂದ್ ಜಾಧವ್ ಅವರ ಪೀಠ ಪ್ರಶ್ನಿಸಿದೆ.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಯ್ಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಭೂಮಿಪೂಜೆಗೆ 300ಕ್ಕೂ ಅಧಿಕ ಅತಿಥಿಗಳು ಸೇರುವುದನ್ನು ತಡೆಯಬೇಕೆಂದು ಕೋರಿ ಗೋಖಲೆ ಸಲ್ಲಿಸಿದ್ದ ಪಿಐಎಲ್ ಅನ್ನು ಅಲಹಾಬಾದ್ ಹೈಕೋರ್ಟ್ ಜುಲೈ 23ರಂದು ವಜಾಗೊಳಿಸಿದ ನಂತರ ಹಲವಾರು ಬೆದರಿಕೆ ಕರೆಗಳು ಹಾಗೂ ಸಂದೇಶಗಳನ್ನು ಪಡೆದಿದ್ದ ಅವರು ಬಾಂಬೆ ಹೈಕೋರ್ಟ್ ಕದ ತಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News