×
Ad

ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ಗುಂಡಿನ ದಾಳಿ

Update: 2020-10-30 18:37 IST

ಮಂಗಳೂರು, ಅ. 30: ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದು, ಗುಂಡು ಹಾರಿಸಿದ ಘಟನೆ ನಗರದ ಫಳ್ನೀರ್ ಸಮೀಪದ ಮಳಿಗೆಯೊಂದರಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಫಳ್ನೀರ್ ನಿವಾಸಿ ಸಾಹಿಲ್ (30) ಮತ್ತು ಸುರತ್ಕಲ್ ನಿವಾಸಿ ಸೈಫ್ (25) ಗಾಯಗೊಂಡವರು. ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ. 

ಘಟನೆ ವಿವರ : ಫಳ್ನೀರ್‌ನ ಜ್ಯೂಸ್ ಮಳಿಗೆಯೊಂದರಲ್ಲಿ ಸಂಜೆ 5:30ರ ಸುಮಾರಿಗೆ ತಿಂಡಿ ವಿಚಾರದಲ್ಲಿ ಮಾರಾಮಾರಿಯಾಗಿದೆ. ಯುವಕರ ತಂಡ ಗ್ರಾಹಕರಾಗಿ ಆಗಮಿಸಿತ್ತು. ಅಲ್ಲಿ ಸಮೋಸ ಕೇಳಿದ ತಂಡದ ನಾಲ್ವರು ಹೊಟೇಲ್ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದು, ನಂತರ ಹೊಟೇಲ್‌ನ ಕಿಟಕಿ ಗಾಜು, ಪೀಠೋಪಕರಣ ಧ್ವಂಸಗೊಳಿಸಿ ಪರಾರಿಗೆ ಯತ್ನಿಸಿದ್ದರು.

ಅವರನ್ನು ಹಿಡಿಯಲು ಯತ್ನಿಸಿದ ಹೊಟೇಲ್ ಸಿಬ್ಬಂದಿ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ಇದರಿಂದ ಗುಂಡು ತಗುಲಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವೇಳೆ ಸ್ಥಳೀಯರು ಸೇರಿ ಇಬ್ಬರನ್ನು ಹಿಡಿದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಘಟನೆಯಲ್ಲಿ ಏರ್ ಪಿಸ್ತೂಲ್‌ನಿಂದ ಗುಂಡು ಹೊಡೆದಿರುವ ಸಾಧ್ಯತೆ ಇದ್ದು, ತನಿಖೆ ನಡೆಸಲಾಗುತ್ತಿದೆ. ದುಷ್ಕರ್ಮಿಗಳ ಬಳಿ ಪಿಸ್ತೂಲ್ ಹೇಗೆ ಬಂತು ಎನ್ನುವ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News