ಕಮಲ್‌ನಾಥ್ ಅವರ ‘ತಾರಾ ಪ್ರಚಾರಕ’ ಸ್ಥಾನಮಾನ ರದ್ದುಗೊಳಿಸಿದ ಚುನಾವಣಾ ಆಯೋಗ
ಹೊಸದಿಲ್ಲಿ, ಅ. 30: ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಪುನರಾವರ್ತಿಸಿ ರುವುದಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರ ‘ತಾರಾ ಪ್ರಚಾರಕ’ ಸ್ಥಾನಮಾನವನ್ನು ಚುನಾವಣಾ ಆಯೋಗ ಶುಕ್ರವಾರ ರದ್ದುಗೊಳಿಸಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪುನರಾವರ್ತನೆ ಹಾಗೂ ನೀಡಲಾದ ಸಲಹೆಯ ಸಂಪೂರ್ಣ ನಿರಾಕರಣೆ ಕಾರಣಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರ ‘ತಾರ ಪ್ರಚಾರಕ’ ಸ್ಥಾನಮಾನವನ್ನು ರಾಜ್ಯದ ಪ್ರಸಕ್ತ ವಿಧಾನ ಸಭೆ ಉಪ ಚುನಾವಣೆಗೆ ಕೂಡಲೇ ಅನ್ವಯವಾಗುವಂತೆ ರದ್ದುಪಡಿಸಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಜಾರಿಗೊಳಿಸಿದ ಆದೇಶ ಹೇಳಿದೆ.
ಕಮಲ್‌ನಾಥ್ ಅವರಿಗೆ ‘ತಾರಾ ಪ್ರಚಾರಕ’ ಸ್ಥಾನಮಾನವನ್ನು ಚುನಾವಣಾ ಆಯೋಗ ನೀಡಲಾರದು ಎಂದು ಆದೇಶ ಹೇಳಿದೆ. ‘‘ಆದಾಗ್ಯೂ, ಕಮಲ್‌ನಾಥ್ ಯಾವುದೇ ಚುನಾವಣಾ ಪ್ರಚಾರ ನಡೆಸಿದರೂ ಅವರು ಚುನಾವಣಾ ಪ್ರಚಾರ ನಡೆಸುವ ಕ್ಷೇತ್ರದ ಅಭ್ಯರ್ಥಿ ಕಮಲ್‌ನಾಥ್ ಅವರ ಭೇಟಿ, ವಾಸ್ತವ್ಯ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಸಂಪೂರ್ಣ ವೆಚ್ಚ ಭರಿಸಬೇಕು’’ ಎಂದು ಚುನಾವಣಾ ಆಯೋಗ ಹೇಳಿದೆ. ಈ ಕ್ರಮ ‘ಅಸಾಂವಿಧಾನಿಕ’ ಎಂದು ಹೇಳಿರುವ ಕಾಂಗ್ರೆಸ್ ಚುನಾವಣಾ ಆಯೋಗದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲಾಗುವುದು ಎಂದು ಹೇಳಿದೆ.