ಗ್ರೀಸ್, ಟರ್ಕಿಯಲ್ಲಿ ಭಾರೀ ಭೂಕಂಪ, ಹಲವಾರು ಕಟ್ಟಡಗಳಿಗೆ ಹಾನಿ
Update: 2020-10-30 19:27 IST
ಅಥೆನ್ಸ್ (ಗ್ರೀಸ್), ಅ. 30: ಗ್ರೀಸ್ ಮತ್ತು ಟರ್ಕಿಯಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಕಟ್ಟಡಗಳು ಕುಸಿದಿವೆ. ಭೂಕಂಪದಿಂದಾಗಿ ಸಮುದ್ರ ಉಕ್ಕೇರಿದ್ದು, ಟರ್ಕಿಯ ರಿಸಾರ್ಟ್ ನಗರ ಇಝ್ಮಿರ್‌ನ ರಸ್ತೆಗಳು ಜಲಾವೃತವಾಗಿವೆ.
ಗ್ರೀಸ್‌ನ ಸಮೋಸ್ ದ್ವೀಪಕ್ಕೂ ಸಣ್ಣ ಪ್ರಮಾಣದ ಸುನಾಮಿ ಅಪ್ಪಳಿಸಿದೆ ಹಾಗೂ ಕಟ್ಟಡಗಳು ನಾಶಗೊಂಡಿವೆ ಎಂದು ಆ ದೇಶದ ಸರಕಾರಿ ಟಿವಿ ವರದಿ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 7ರ ತೀವ್ರತೆ ಹೊಂದಿದ್ದ ಭೂಕಂಪದ ಕೇಂದ್ರ ಬಿಂದು ಸಮೋಸ್ ದ್ವೀಪದಲ್ಲಿರುವ ಕರ್ಲೊವಸಿ ಪಟ್ಟಣದಿಂದ 14 ಕಿ.ಮೀ. ದೂರದಲ್ಲಿ ಏಜಿಯನ್ ಸಮುದ್ರದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ.