ಡಾ. ಕಾರಂತರ ಜೀವನ ಮೌಲ್ಯಗಳೇ ಪತ್ರಿಕೋದ್ಯಮದ ಭಾಗಗಳು: ಡಾ.ಯು.ಪಿ ಶಿವಾನಂದ

Update: 2020-10-30 14:28 GMT

ಪುತ್ತೂರು : ಸಮಾಜಕ್ಕೆ ಏನನ್ನಾದರೂ ಹಂಚಿಕೊಳ್ಳಬೇಕು ಎಂದಾದರೆ ಡಾ.ಶಿವರಾಮ ಕಾರಂತರ ಬದುಕನ್ನು ನೋಡಬೇಕು. ಅನೇಕ ಸವಾಲು ಗಳನ್ನು ದಿಟ್ಟವಾಗಿ ಎದುರಿಸಿದ ಅವರ ಬದುಕಿನ ಮೌಲ್ಯಗಳೇ ಪತ್ರಿಕೋದ್ಯಮ ಎಂದು ಸುದ್ದಿ ಪ್ರತಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ ಶಿವಾನಂದ ಹೇಳಿದರು.

ಅವರು ಶುಕ್ರವಾರ  ಡಾ.ಕಾರಂತ ಮತ್ತು ಗ್ರಾಮೀಣ ಪತ್ರಿಕೋದ್ಯಮ ಎನ್ನುವ ವಿಷಯದ ವಾರದ ಆನ್ ಲೈನ್ ಕಾರ್ಯಕ್ರಮದಲ್ಲಿ ಬಾಲವನದಿಂದ ಮಾತನಾಡಿದರು.

"ಡಾ.ಶಿವರಾಮ ಕಾರಂತರ ಹುಚ್ಚು ಮನಸ್ಸಿನ ನೂರೊಂದು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದು. ಆದರೆ ಪರಿಸ್ಥಿತಿಯ ಒತ್ತಡ, ಆರ್ಥಿಕ ಅಡಚಣೆ ಮತ್ತು ವಾಚಕರ ಕೊರತೆಯಿಂದಾಗಿ ಅದನ್ನು ಹೆಚ್ಚು ದೀರ್ಘಕಾಲ ಮುಂದುವರಿಸಲು ಸಾಧ್ಯವಾಗಲಿಲ್ಲ. ಸದಾ ಪ್ರಯೋಗಶೀಲ ಗುಣವಿರಿಸಿಕೊಂಡಿದ್ದ ಕಾರಂತರು ಹೊಸ ಹೊಸ ಸಾಹಸಗಳಿಗೆ ಇಳಿಯುತ್ತಲೂ ಇದ್ದರು. ಹಾಗೆಂದು ಯಾವುದೇ ಕ್ಷೇತ್ರಕ್ಕೂ ಅಂಟಿಕೊಳ್ಳುವ ಸ್ವಭಾವ ಅವರದ್ದಾಗಿರಲಿಲ್ಲ. ಅವರು ಹೊರತರುತ್ತಿದ್ದ ವಸಂತ ಪತ್ರಿಕೆ ಅವರಿಗೆ ಹೊಸ ಅನುಭವವನ್ನು ನೀಡಿದ್ದಲ್ಲದೇ ಮುಂದೆ ಪತ್ರಿಕೆ ನಡೆಸುವ ಸಾಹಸಕ್ಕಿಳಿದ ನಮ್ಮಂತವರಿಗೆ ಎಚ್ಚರಿಕೆಯನ್ನೂ ನೀಡಿದೆ. ಪತ್ರಿಕೆಯನ್ನು ನಡೆಸುವ ಜವಾಬ್ದಾರಿ ಅತ್ಯಂತ ಸವಾಲಿನದ್ದು ಎನ್ನುವುದನ್ನು ಕಾರಂತರ ಪತ್ರಿಕೋದ್ಯಮ ಬದುಕಿನಿಂದಲೂ ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮ ಡಾ.ಶಿವರಾಮ ಕಾರಂತರ ಬಾಲವನ ಫೇಸ್ ಬುಕ್, ಯೂಟ್ಯೂಬ್, ಬಾಲವನದ ಎಲ್ಲಾ ವಾಟ್ಸ್ ಆ್ಯಪ್ ಗ್ರೂಪ್, ಪುತ್ತೂರು ಸುದ್ದಿ ಮಲ್ಟಿಮೀಡಿಯಾ ಚಾನೆಲ್  ಮತ್ತು ಗ್ರೂಪ್, ಸ್ಥಳೀಯ ದೃಶ್ಯ ಮಾದ್ಯಮಗಳ ಮೂಲಕ ಪ್ರಸಾರಗೊಂಡಿತು.  ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ ಸ್ವಾಗತಿಸಿ ಪರಿಚಯಿಸಿದರು. ಮೇಲ್ವಿಚಾರಕ ಅಶೋಕ ಮಣಿಯಾಣಿ ವಂದಿಸಿದರು. ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪುತ್ತೂರಿನ ಪತ್ರಕರ್ತರು, ತಾಲೂಕು ಪತ್ರಕರ್ತರ ಸಂಘ, ವಿಭಾ ಟೆಕ್ನಾಲಜಿ ಹಾಗೂ ಸಿಟಿವಿ ಕೇಬಲ್ ನೆಟ್ವರ್ಕ್ನವರು  ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News