×
Ad

ಫ್ರೆಂಚ್ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿ ಉಗ್ರ ಬಲಪಂಥೀಯ, ಆತನಿಗೂ ಇಸ್ಲಾಮ್ ಧರ್ಮಕ್ಕೂ ಸಂಬಂಧವಿಲ್ಲ: ಅಧಿಕಾರಿಗಳು

Update: 2020-10-30 20:56 IST
 ಫೋಟೊ ಕೃಪೆ: twitter.com

ಪ್ಯಾರಿಸ್, ಅ. 30: ಫ್ರಾನ್ಸ್ ನಗರ ಅವಿಗ್ನಾನ್‌ನಲ್ಲಿ ಗುರುವಾರ ಪೊಲೀಸರಿಂದ ಹತ್ಯೆಗೊಳಗಾದ ವ್ಯಕ್ತಿಯು ವಲಸಿಗ ವಿರೋಧಿ ಗುಂಪೊಂದರ ಸದಸ್ಯನಾಗಿದ್ದನು ಹಾಗೂ ಆತನು ಉತ್ತರ ಆಫ್ರಿಕ ಮೂಲದ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದನು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನೀಸ್ ನಗರದ ಚರ್ಚೊಂದರಲ್ಲಿ ದುಷ್ಕರ್ಮಿಯೊಬ್ಬ ಮೂವರನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಅವಿಗ್ನಾನ್‌ನಲ್ಲಿ ಈ ಘಟನೆ ಸಂಭವಿಸಿತ್ತು. ಬಂದೂಕು ಝಳಪಿಸುತ್ತಿದ್ದ್ದ ವ್ಯಕ್ತಿಗೆ, ಬಂದೂಕನ್ನು ಕೆಳಗೆ ಹಾಕಲು ಪೊಲೀಸರು ಸೂಚಿಸಿದರೂ ಆತ ನಿರಾಕರಿಸಿದ ಎನ್ನಲಾಗಿದೆ. ಪೊಲೀಸರ ಎಚ್ಚರಿಕೆ ಗುಂಡಿಗೂ ಆತ ಕಿವಿಗೊಡದಾಗ ಪೊಲೀಸರು ಗುಂಡು ಹಾರಿಸಿ ಅವನನ್ನು ಕೊಂದರು ಎಂದು ಪೊಲೀಸರು ಹೇಳಿದ್ದಾರೆ.

ಆತ ‘ಅಲ್ಲಾಹು ಅಕ್ಬರ್’ ಎಂಬುದಾಗಿ ಕೂಗುತ್ತಿದ್ದ ಎಂದು ಫ್ರಾನ್ಸ್‌ನ ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ, ಬಳಿಕ ಸ್ಪಷ್ಟೀಕರಣ ನೀಡಿರುವ ಅಧಿಕಾರಿಗಳು, ಆತ ಕಡು ಬಲಪಂಥೀಯ ಗುಂಪೊಂದರ ಸದಸ್ಯನಾಗಿದ್ದು, ಇಸ್ಲಾಮ್‌ನೊಂದಿಗೆ ಯಾವುದೇ ನಂಟು ಹೊಂದಿಲ್ಲ ಎಂದು ಹೇಳಿದ್ದಾರೆ.

 ‘‘ಬಂದೂಕು ಝಳಪಿಸುತ್ತಿದ್ದ ವ್ಯಕ್ತಿಯು 33 ವರ್ಷದ ಫ್ರಾನ್ಸ್ ಸಂಜಾತನಾಗಿದ್ದು, ಇಸ್ಲಾಮ್ ಧರ್ಮದೊಂದಿಗೆ ಯಾವುದೇ ನಂಟು ಹೊಂದಿಲ್ಲ ಹಾಗೂ ಅವನು ಮಾನಸಿಕ ಅಸ್ಥಿರತೆ ಹೊಂದಿರುವಂತೆ ಕಂಡುಬಂದಿದೆ’’ ಎಂದು ಅವಿಗ್ನಾನ್ ಪ್ರಾಸಿಕ್ಯೂಟರ್ ಫಿಲಿಪ್ ಗ್ವಾಮಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News