×
Ad

ಸುರಕ್ಷಿತ ಸಂದೇಶ ರವಾನೆಗೆ ಮೊಬೈಲ್ ಆ್ಯಪ್ ರೂಪಿಸಿದ ಭಾರತೀಯ ಸೇನೆ

Update: 2020-10-30 21:53 IST

ಹೊಸದಿಲ್ಲಿ, ಅ.30: ಮೊಬೈಲ್‌ನಲ್ಲಿ ಸುರಕ್ಷಿತವಾಗಿ ಸಂದೇಶ ಕಳಿಸುವ ‘ಸಾಯ್’ ಆ್ಯಪ್ ಅನ್ನು ಭಾರತೀಯ ಸೇನೆ ರೂಪಿಸಿದ್ದು , ಇದು ಯಾವುದೇ ವರ್ಗೀಕೃತ ಮಾಹಿತಿ ಶತ್ರುಗಳ ಗುಪ್ತಚರ ಇಲಾಖೆಗೆ ಸೋರಿಕೆಯಾಗುವುದನ್ನು ತಡೆಯಲಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

‘ಸೆಕ್ಯೂರ್ ಅಪ್ಲಿಕೇಷನ್ ಫಾರ್ ದಿ ಇಂಟರ್‌ನೆಟ್’ ಅಥವಾ ಸಾಯ್ ಎಂಬ ಹೆಸರಿನ ಈ ಆ್ಯಪ್ ಮೂಲಕ ಅಂಡ್ರಾಯ್ಡ್ ಫ್ಲಾಟ್‌ಫಾರ್ಮ್‌ಗೆ ಧ್ವನಿ ಸಂದೇಶ ಅಥವಾ ಬರಹದ ಸಂದೇಶವನ್ನು ಸುರಕ್ಷಿತವಾಗಿ ಕಳುಹಿಸಬಹುದು. ಈಗ ಚಾಲ್ತಿಯಲ್ಲಿರುವ ವಾಣಿಜ್ಯ ಉದ್ದೇಶದ ಸಂದೇಶವಾಹಕ ಆ್ಯಪ್‌ಗಳಾದ ವಾಟ್ಸಾಪ್, ಟೆಲಿಗ್ರಾಮ್, ಸಂವಾದ್, ಜಿಐಎಂಎಸ್‌ನಂತೆಯೇ ಕಾರ್ಯನಿರ್ವಹಿಸಲಿದ್ದು ಆದ್ಯಂತ ಗೂಢಲಿಪೀಕರಣ ನಿಯಮಾವಳಿಯನ್ನು ಅನುಸರಿಸುತ್ತದೆ. ಸ್ಥಾನಿಕ(ಸ್ಥಳೀಯ) ಸರ್ವರ್‌ಗಳಲ್ಲಿ ಇದನ್ನು ಬಳಸಬಹುದು. ಸಿಇಆರ್‌ಟಿ-ಇನ್ ನೇಮಿಸಿದ ಆಡಿಟರ್ ಮತ್ತು ಸೇನೆಯ ಸೈಬರ್ ತಂಡ ಇದನ್ನು ಪರೀಕ್ಷಿಸಿದೆ. ಸೇನೆಯ ವಿವಿಧ ವಿಭಾಗಗಳ ಮಧ್ಯೆ ಸುರಕ್ಷಿತವಾಗಿ ಸಂದೇಶವನ್ನು ರವಾನಿಸಲು ಈ ಆ್ಯಪ್ ಬಳಸಲಾಗುವುದು ಎಂದು ರಕ್ಷಣಾ ಇಲಾಖೆ ಹೇಳಿದೆ.

ಸೇನೆಯ ಸಿಗ್ನಲ್ ತಂಡದಲ್ಲಿ ಕಮಾಂಡಿಂಗ್ ಅಧಿಕಾರಿಯಾಗಿರುವ ಕರ್ನಲ್ ಸಾಯ್ ಶಂಕರ್ ಈ ಆ್ಯಪ್ ರೂಪಿಸಿದ್ದು ಇದನ್ನು ಮಿಲಿಟರಿ ದರ್ಜೆಯ ಮಾನದಂಡಕ್ಕೆ ನವೀಕರಿಸಲಾಗಿದೆ. ಜುಲೈಯಲ್ಲಿ ಕೇಂದ್ರ ಸರಕಾರ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದ್ದು ನಿಷೇಧಿತ ಆ್ಯಪ್‌ಗಳನ್ನು ತಮ್ಮ ಮೊಬೈಲ್‌ಗಳಿಂದ ತೆಗೆದು ಹಾಕುವಂತೆ ರಕ್ಷಣಾ ಇಲಾಖೆಯು ಯೋಧರಿಗೆ ಮತ್ತು ಸೇನಾಧಿಕಾರಿಗಳಿಗೆ ಸೂಚಿಸಿತ್ತು. ದೇಶದ ಕೆಲವು ಸೂಕ್ಷ್ಮ ಮಾಹಿತಿ ಸೋರಿಕೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News