ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು : ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

Update: 2020-10-30 17:35 GMT

ಹೊಸದಿಲ್ಲಿ, ಅ.30: ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ನಿರ್ದೇಶಿಸಬೇಕು ಹಾಗೂ ದ್ವೇಷದ ಹೇಳಿಕೆ ಮತ್ತು ಸುಳ್ಳುಸುದ್ದಿ ಪ್ರಸಾರಕ್ಕೆ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಇನ್‌ಸ್ಟಾಗ್ರಾಂಗಳನ್ನು ನೇರ ಹೊಣೆಯಾಗಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷದ ಹೇಳಿಕೆ ಮತ್ತು ನಕಲಿ ಸುದ್ಧಿಗಳನ್ನು ಪ್ರಸಾರ ಮಾಡುವುದರಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಕೂಲವಾಗುವ ಕಾನೂನು ರೂಪಿಸಲು ಸೂಚಿಸಬೇಕು ಎಂದು ಕೋರಿ ನ್ಯಾಯವಾದಿ ವಿನೀತ್ ಜಿಂದಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.

ದ್ವೇಷ ಭಾಷಣ, ಹೇಳಿಕೆ ಮತ್ತು ಸುಳ್ಳು ಸುದ್ದಿಗಳನ್ನು ಅಲ್ಪಾವಧಿಯಲ್ಲೇ ತೆಗೆದುಹಾಕುವ ಸ್ವಯಂಚಾಲಿತ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕು. ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ದ್ವೇಷಪೂರಿತ ಹೇಳಿಕೆ , ಸುಳ್ಳು ಸುದ್ಧಿ ಪ್ರಸಾರ ಮಾಡಿದ ಬಗ್ಗೆ ದಾಖಲಾಗುವ ದೂರಿನ ತನಿಖೆಗೆ ತಜ್ಞ ತನಿಖಾಧಿಕಾರಿಯನ್ನು ನೇಮಿಸುವಂತೆ ಸರಕಾರಕ್ಕೆ ಸೂಚಿಸಬೇಕು. ನೋಂದಾಯಿತ ಖಾತೆಯಿದ್ದರೆ ಯಾರು ಬೇಕಾದರೂ ಸಾಮಾಜಿಕ ಮಾಧ್ಯಮದಲ್ಲಿ ಚಾನೆಲ್ ಆರಂಭಿಸಬಹುದು. ಅಂದರೆ ತಮಗಿಷ್ಟ ಬಂದದ್ದನ್ನು ಬರೆಯಬಹುದು, ಪ್ರಸಾರ ಮಾಡಬಹುದು. ಇಲ್ಲಿರುವ ಸುದ್ದಿಗಳಿಗೆ ಯಾವುದೇ ನಿಯಂತ್ರಣ ಅಥವಾ ನೀತಿ ನಿಯಮಗಳಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದ್ದು ಇತ್ತೀಚೆಗೆ ವ್ಯಕ್ತಿಯೊಬ್ಬನ ಟ್ವಿಟರ್ ಖಾತೆಯಿಂದ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಟ್ವೀಟ್ ಪ್ರಸಾರವಾಗಿರುವುದನ್ನು ಉದಾಹರಣೆ ನೀಡಲಾಗಿದೆ. ವಿವಿಧ ದೇಶಗಳು ಜಾರಿಗೊಳಿಸಿರುವ ನಿಯಂತ್ರಣ ಮಾನದಂಡವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News