ವಾಕ್ ಸ್ವಾತಂತ್ರ್ಯ ಎಲ್ಲೆಯಿಲ್ಲದ ಸ್ವಾತಂತ್ರ್ಯವಲ್ಲ: ಚಾರ್ಲಿ ಹೆಬ್ಡೊ ಮ್ಯಾಗಝಿನ್ ವಿವಾದದ ಕುರಿತು ಕೆನಡಾ ಪ್ರಧಾನಿ

Update: 2020-10-31 07:58 GMT

ಒಂಟಾರಿಯೋ: ವಾಕ್ ಸ್ವಾತಂತ್ರ್ಯವನ್ನು ಸಮರ್ಥಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ ಅದೇ ಸಮಯ ಅದು ಎಲ್ಲೆಯಿಲ್ಲದ ಸ್ವಾತಂತ್ರ್ಯವಲ್ಲ ಎಂದಿದ್ದಾರಲ್ಲದೆ ಅನಗತ್ಯವಾಗಿ ಕೆಲ ಸಮುದಾಯಗಳಿಗೆ ಅದರಿಂದ ನೋವುಂಟಾಗಬಾರದು ಎಂದಿದ್ದಾರೆ.

"ನಾವು ಯವತ್ತೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸುತ್ತೇವೆ,'' ಎಂದು ಫ್ರಾನ್ಸ್ ದೇಶದ ಚಾರ್ಲಿ ಹೆಬ್ಡೊ ಮ್ಯಾಗಝಿನ್ ಮಾಡಿದಂತೆ ಪ್ರವಾದಿಯ ಕಾರ್ಟೂನ್ ತೋರಿಸುವ ಹಕ್ಕಿನ ಕುರಿತಂತೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ."ಆದರೆ ಈ ಸ್ವಾತಂತ್ರ್ಯ ಮಿತಿಯಿಲ್ಲದ ಸ್ವಾತಂತ್ರ್ಯವಲ್ಲ, ಇತರರಿಗೆ ಗೌರವ ನೀಡದೆ ನಾವು ಈ ಸಮಾಜ ಹಾಗೂ ಜಗತ್ತನ್ನು ಹಂಚಿಕೊಂಡಿರುವ ಇತರರಿಗೆ ಅನಗತ್ಯವಾಗಿ ನೋವುಂಟು ಮಾಡಬಾರದು,'' ಎಂದು ಹೇಳಿದರು.

"ಉದಾಹರಣೆಗೆ ಜನರಿಂದ ತುಂಬಿರುವ ಚಿತ್ರಮಂದಿರದಲ್ಲಿ ಗುಂಡಿಕ್ಕಿ ಎಂದು ಬೊಬ್ಬೆ ಹೊಡೆಯುವ ಹಕ್ಕು ನಮಗಿಲ್ಲ, ಯಾವತ್ತೂ ಒಂದು ಮಿತಿಯಿರುತ್ತದೆ,'' ಎಂದು ಅವರು ಹೇಳಿದರು.

ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರ ಹೇಳಿಕೆಯಿಂದ ದೂರ ಸರಿದು ನಿಂತ ಜಸ್ಟಿನ್ ಟ್ರುಡಿಯೊ, ವಾಕ್ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಬಳಸಬೇಕು ಎಂದರು. "ನಮ್ಮಂತಹ ವಿವಿಧತೆಯ ಸಮಾಜದಲ್ಲಿ ನಮ್ಮ ಮಾತುಗಳು ಹಾಗೂ ಕೃತಿಗಳು ಇತರರ ಮೇಲೆ, ಮುಖ್ಯವಾಗಿ ಸಾಕಷ್ಟು ತಾರತಮ್ಯ ಎದುರಿಸುತ್ತಿರುವ ಇಂತಹ ಸಮುದಾಯಗಳು ಹಾಗೂ ಜನಸಂಖ್ಯೆಯ ಮೇಲೆ ಬೀರುವ ಪರಿಣಾಮಗಳ ಕುರಿತು ನಾವು ಎಚ್ಚರಿಕೆಯಿಂದಿರಬೇಕು,'' ಎಂದರು.

ಅದೇ ಸಮಯ ಇಂತಹ ವಿಚಾರಗಳ ಕುರಿತು ಸಮಾಜ ಬಹಿರಂಗ ಚರ್ಚೆಗೆ ಸಿದ್ಧವಿದೆ ಎಂದರು.

ಫ್ರಾನ್ಸ್ ನಲ್ಲಿ ನಡೆದ ಉಗ್ರ ದಾಳಿಗಳನ್ನು ಕಟುವಾಗಿ ಖಂಡಿಸಿದ ಅವರು ತಮ್ಮ ದೇಶ  ಬಹಳಷ್ಟು ಕಷ್ಟಕರ ಪರಿಸ್ಥಿತಿಯೆದುರಿಸುತ್ತಿರುವ ಫ್ರೆಂಚ್ ಸ್ನೇಹಿತರ ಜತೆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News