ಮಂಗಳೂರು ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ !

Update: 2020-10-31 17:05 GMT

ಮಂಗಳೂರು, ಅ.31: ಅಂತಾರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಯೋಜನೆಯನ್ವಯ ಇಂದು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ನಿರ್ವಹಣೆಗಾಗಿ ಹಸ್ತಾಂತರದ ಪ್ರಕ್ರಿಯೆ ನಿನ್ನೆ ತಡರಾತ್ರಿ (ರಾತ್ರಿ 12 ಗಂಟೆಗೆ )ನಡೆದಿದೆ.

ಈ ಮೂಲಕ ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣ ‘ಅದಾನಿ ಏರ್‌ಪೋರ್ಟ್’ ಬದಲಾಗಿದೆ. ವಿಮಾನಗಳ ಹಾರಾಟ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಅದಾನಿ ಸಮೂಹ ಸಂಸ್ಥೆ ನಿರ್ವಹಿಸಲಿದೆ.

ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ವಿ.ವಿ. ರಾವ್ ಅವರು ಅದಾನಿ ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಸಿಇಒ ಅಶುತೋಷ್ ಚಂದ್ರ ಹಾಗೂ ಅದಾನಿ ಎರ್‌ಪೋರ್ಟ್ಸ್‌ನ ಸಿಇಒ ಬೆಹ್ನಾಡ್ ಝಂಡಿ ಅವರಿಗೆ ಹಸ್ತಾಂತರಿಸಿದರು.

50 ವರ್ಷಗಳ ಲೀಸ್‌ಗೆ ಅದಾನಿ ಸಂಸ್ಥೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಒಂದು ವರ್ಷದ ಅವಧಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಜತೆಯಾಗಿ ಕಾರ್ಯ ನಿರ್ವಹಿಸಲಿದೆ. ಈ ಸಂದರ್ಭ ಹಣ ವಿನಿಯೋಗ, ಟರ್ಮಿನಲ್‌ನಲ್ಲಿ ವಾಣಿಜ್ಯ ಚಟುವಟಿಕೆ ಸೇರಿದಂತೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.

ಪ್ರಾಧಿಕಾರವು ವಿಮಾನ ಆಗಮನ- ನಿರ್ಗಮನ ವಿಚಾರಕ್ಕೆ ಸಂಬಂಧಿಸಿ ವ್ಯವಸ್ಥೆಯ ಬಗ್ಗೆ ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸಲಿದೆ. ಸಂಪೂರ್ಣವಾಗಿ ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣದ ಹಸ್ತಾಂತರದ ಬಳಿಕವೂ ವಿಮಾನ ಆಗಮನ- ನಿರ್ಗಮನದ ಉಸ್ತುವಾರಿಯನ್ನು ಪ್ರಾಧಿಕಾರ ವಹಿಸಲಿದೆ. ಭದ್ರತಾ ಸಿಬ್ಬಂದಿ ಹಾಗೂ ಏರ್‌ಲೈನ್ ಸಿಬ್ಬಂದಿ ಹೊರತುಪಡಿಸಿ ಟರ್ಮಿನಲ್ ಕಟ್ಟಡ, ರನ್ ವೇ, ಎಲೆಕ್ಟ್ರಿಕಲ್, ಸಿವಿಲ್ ಸೇರಿದಂತೆ ಎಲ್ಲಾ ವಿಚಾರವನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.

ಅದಾನಿ ಸಂಸ್ಥೆ ಇದೀಗ ಅಧಿಕೃತ ನಿರ್ವಹಣೆಯನ್ನು ವಹಿಸಿಕೊಂಡಿರುವುದರಿಂದ ಕೋಟ್ಯಾಂತರ ರೂ. ಹೂಡಿಕೆ ಮಾಡುವ ಸಾಧ್ಯತೆಯಿದೆ. ಬಹುನಿರೀಕ್ಷೆಯ ರನ್‌ವೇ ವಿಸ್ತರಣೆ, ಹೊಸದಿಲ್ಲಿ-ಮುಂಬೈ ಏರ್‌ಪೋರ್ಟ್ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್, ಮಾಲ್‌ಗಳು ಬರಲಿವೆ. ಪ್ರಯಾಣಿಕರಿಗೆ ವಿಧಿಸುವ ಶುಲ್ಕದ ಪ್ರಮಾಣ, ಟರ್ಮಿನಲ್ ಒಳಗಿನ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯು ಅದಾನಿ ಸಂಸ್ಥೆಗೆ ಶುಕ್ರವಾರ ತಡಾತ್ರಿ 12 ಗಂಟೆಗೆ ಹಸ್ತಾಂತರವಾಗಿದೆ. ಹಸ್ತಾಂರಗೊಂಡ ತಕ್ಷಣವೇ ಮಂಗಳೂರು ವಿಮಾನ ನಿಲ್ದಾಣದ ಹೆಸರು ಕೂಡಾ ಅದಾನಿ ಏರ್‌ಪೋರ್ಟ್ ಎಂಬುದಾಗಿ ಬದಲಾವಣೆಗೊಂಡಿದೆ. ವಿಮಾನ ನಿಲ್ದಾಣದ ಒಳಗೆ ಹಾಗೂ ಹೊರಗಡೆ ಅದಾನಿ ಏರ್‌ಪೋರ್ಟ್ ನಾಮಫಲಕ ಹಾಕಲಾಗಿದ್ದು, ವಿಮಾನ ನಿಲ್ದಾಣದ ಆಗಮನ ಮತ್ತು ನಿರ್ಗಮನ ರಸ್ತೆಯ ದ್ವಾರ ಇರುವ ಕೆಂಜಾರು ಬಜಪೆ ಹೆದ್ದಾರಿಯಲ್ಲಿರುವ ನಾಮಫಲಕದಲ್ಲೂ ಅದಾನಿ ಏರ್‌ಪೋರ್ಟ್ ಹೆಸರು ಸೇರ್ಪಡೆಗೊಂಡಿದೆ.

ಹಸ್ತಾಂತರದ ಬಳಿಕ ಬೆಳಗ್ಗೆ 1.45ಕ್ಕೆ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಿದ ವಿಮಾನದ ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಅದಾನಿ ಸಂಸ್ಥೆಯ ಪ್ರಮುಖರು ಸಂಭ್ರಮ ಹಂಚಿಕೊಂಡರು. ಹಸ್ತಾಂತರ ಪ್ರಕ್ರಿಯೆ ಕುರಿತಂತೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News