×
Ad

ಭೂ ಮಸೂದೆ ಕಾಯ್ದೆ ವಿರೋಧಿಸಿದವರ ಮೇಲೆ ಎಚ್ಚರವಿರಲಿ: ರಮಾನಾಥ ರೈ

Update: 2020-10-31 17:39 IST

ಬಂಟ್ವಾಳ, ಅ.31: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಡವರು, ರೈತರು, ಕಾರ್ಮಿಕರು, ದುರ್ಬಲ ವರ್ಗದ ಜನರಿಗೆ ಸ್ವಾಭಿಮಾನದ ಜೀವನ ಒದಗಿಸಲು ಜಾರಿಗೆ ತಂದ ಭೂ ಮಸೂದೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣ, 20 ಅಂಶಗಳ ಕಾರ್ಯಕ್ರಮ, ಬಡತನ ನಿರ್ಮೂಲನೆ, ಜೀತ ಪದ್ಧತಿ ನಿಷೇಧ ಮೊದಲಾದ ಹತ್ತು ಹಲವು ಮಹತ್ವದ ಕಾರ್ಯಕ್ರಮಗಳನ್ನು ವಿರೋಧಿಸಿದವರ ಮೇಲೆ ನಾವು ಎಚ್ಚರಿಕೆ ಇಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬಿ.ಸಿ.ರೋಡ್ ನ ರಂಗೋಲಿ ಸಭಾಂಗಣದಲ್ಲಿ ಶನಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆಯ ಪ್ರಯುಕ್ತ ನಡೆದ 'ಮಾಜಿ ಗೇಣಿದಾರರ ಸಮಾವೇಶ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭೂ ಮಸೂದೆ ಕಾಯ್ದೆ ಜಾರಿಯಾದಾಗ ಜನಸಂಘ ಪ್ರಬಲವಾಗಿ ವಿರೋಧಿಸಿತ್ತು. ಅದರ ಜೊತೆಗೆ ಕಾಂಗ್ರೆಸ್ ನಲ್ಲಿದ್ದ ಒಂದು ಗುಂಪು ಕೂಡಾ ವಿರೋಧಿಸಿತ್ತು. ಆ ಬಳಿಕ ಅವೆಲ್ಲಾ ಸೇರಿ ಬಿಜೆಪಿ ಆಯಿತು. ರೈತರು, ಕಾರ್ಮಿಕರು, ದುರ್ಬಲ ವರ್ಗದ ಸಬಲೀಕರಣವನ್ನು ಅಂದು ಮತ್ತು ಇಂದೂ ಸಹಿಸದ ಅವರ ಬಗ್ಗೆ ಮನಗೆ ಎಚ್ಚರ ಅಗತ್ಯ ಎಂದರು.

ಭೂ ಮಸೂದೆ ಕಾಯ್ದೆಯಿಂದ ಭೂಮಿ ಕಳೆದುಕೊಂಡವರಿಗೆ ಕಾಂಗ್ರೆಸ್, ಇಂದಿರಾ ಗಾಂಧಿ, ದೇವರಾಜ ಅರಸು ಅವರ ನೆನಪು ಈಗಲೂ ಇದೆ. ಆದರೆ ಭೂಮಿ ಪಡೆದು ಇಂದು ಸ್ವಾಭಿಮಾನದ ಜೀವನ ನಡೆಸುತ್ತಿರುವವರು ಇಂದಿರಾ ಗಾಂಧಿ, ದೇವರಾಜ್ ಅರಸು, ಕಾಂಗ್ರೆಸ್ ಅನ್ನು ಮರೆತಿ ದ್ದಾರೆ. ಹಾಗಾಗಿ ನಾವು ಇಂದು ಯುವಜನತೆಗೆ ಇತಿಹಾಸವನ್ನು ನೆನಪಿಸುವ ಕೆಲಸವನ್ನು ಮಾಡಬೇಕು ಎಂದು ರಮಾನಾಥ ರೈ ಹೇಳಿದರು. 

ಭೂ ಮಸೂದೆ ಕಾಯ್ದೆಯಿಂದ ಇಡೀ ರಾಜ್ಯದಲ್ಲಿ ಹೆಚ್ಚು ಲಾಭ ಪಡೆದವರು ದಕ್ಷಿಣ ಕನ್ನಡ ಜಿಲ್ಲೆಯ ಜನರು. ಅಂದು ಇಂದಿರಾ ಗಾಂಧಿ ಜಾರಿ ಮಾಡಿದ ಭೂ ಮಸೂದೆ ಕಾಯ್ದೆಯಿಂದ ಭೂಮಿ ಪಡೆದು ಸ್ವಾಭಿಮಾನದ‌ ಜೀವನ ನಡೆಸುತ್ತಿರುವವರು ಇಂದು ಅದೇ ಇಂದಿರಾ ಗಾಂಧಿಗೆ ಧಿಕ್ಕಾರ ಘೋಷಣೆ ಕೂಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದ ರಮಾನಾಥ ರೈ, ಅಂದು ಒಂದು‌ ಪ್ರತಿ ಗ್ರಾಮ ದಲ್ಲಿ 10ರಿಂದ 15 ಮಂದಿ ಮಾತ್ರ ಪಟ್ಟದಾರರು ಇದ್ದರು. ಭೂ ಮಸೂದೆ ಕಾಯ್ದೆಯಿಂದ ಇಂದು ಪ್ರತೀ ಗ್ರಾಮದಲ್ಲಿ ಎರಡು, ಮೂರು ಸಾವಿರ ಪಟ್ಟದಾರರು ಇದ್ದಾರೆ. ಇದರು ಇಂದಿರಾ ಗಾಂಧಿಯ ಕೊಡುಗೆಯಾಗಿದೆ ಎಂದರು.

ಇಂದು ದೇಶದಲ್ಲಿ ಅಘೋಷಿತ ತುರ್ತ ಪರಿಸ್ಥಿತಿ ಇದೆ. ಇಂದಿರಾ ಗಾಂಧಿಯ ಅಧಿಕಾರದ ಸಂದರ್ಭದಲ್ಲಿ ಆದ ತುರ್ತು ಪರಿಸ್ಥಿತಿಯಿಂದ ಯಾವುದೇ ಬಡವರು, ಕಾರ್ಮಿಕರು, ರೈತರು, ದುರ್ಬಲ ವರ್ಗದ ಜನರು ನಷ್ಟ ಅನುಭವಿಸಿಲ್ಲ. ಬಂಡವಾಳಶಾಹಿಗಳು, ದನಿಕರು, ಶ್ರೀಮಂತರು ಮಾತ್ರ ನಷ್ಟ ಅನುಭವಿಸಿದ್ದಾರೆ. ಆದರೆ ಇಂದಿನ ಅಘೋಷಿದ ತುರ್ತು ಪರಿಸ್ಥಿತಿಯಿಂದ ಬಡವರು, ಕಾರ್ಮಿಕರು, ರೈತರು, ಮಧ್ಯಮ ಹಾಗೂ ದುರ್ಬಲ ವರ್ಗದ ಜನರು ನಷ್ಟ‌ ಅನುಭವಿಸುತ್ತಿದ್ದಾರೆ. ಬಂಡವಾಳ ಶಾಹಿಗಳು, ಕಾರ್ಪೊರೇಟರ್ ಗಳು ಲಾಭ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಯನ್ನು ಟೀಕಿಸಿದರು.

ಕೇಂದ್ರ ಸರಕಾರ ಯಾವುದೇ ಚರ್ಚೆ ಇಲ್ಲದೆ ಜಾರಿ ಮಾಡುತ್ತಿರುವ ಕಾಯ್ದೆಗಳು ರೈತರ, ಕಾರ್ಮಿಕರ ಮರಣ ಶಾಸನವಾಗಿದೆ. ಯೋಜನೆಗಳ ಘೋಷಣೆ ಮಾತ್ರ ಕೇಂದ್ರದ ಸಾಧನೆಯಾಗಿದೆ. ಕಾಂಗ್ರೆಸ್ ಸರಕಾರ ರೈತರ ಸಾಲಮನ್ನಾ ಮಾಡಿದರೆ ಬಿಜೆಪಿ ಸರಕಾರ ಅದಾನಿ, ಅಂಬಾನಿಯ ಸಾಲ ಮನ್ನಾ ಮಾಡುತ್ತಿದೆ. ಖಾಸಗಿ ಕಂಪೆನಿಗಳ ಆರು ಸಾವಿರ ಕೋಟಿ ರೂಪಾಯಿ ಸಾಲ‌ಮನ್ನಾ ಮಾಡಿರುವುದೇ ಪ್ರಧಾನಿಯ ಸಾಧನೆ ಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೀತ ಪದ್ಧತಿಯನ್ನು ನಿಷೇಧಿಸುವ ಮೂಲಕ ಇಂದಿರಾ ಗಾಂಧಿ ಪರಿಶಿಷ್ಟ ಜನಾಂಗವನ್ನು ರಕ್ಷಣೆ ಮಾಡಿದ್ದಾರೆ. ಜನ್ಮ ಜನ್ಮದ ಉದ್ದಕ್ಕೂ ಪರಿಶಿಷ್ಟ ಜನಾಂಗ ಇಂದಿರಾ ಗಾಂಧಿಯನ್ನು ಮರೆಯಬಾರದು. ಸೋವಿಯತ್ ಒಪ್ಪಂದ ಹಾಗೂ ಕೆಲವು ಮಹತ್ವರ ಕಾರ್ಯಕ್ರಮಗಳ ಮೂಲಕ ಇಂದಿರಾ ಗಾಂಧಿ‌ ದೇಶದ ರಕ್ಷಣೆಗೆ ಮುನ್ನುಡಿ ಬರೆದವರು. ದೇಶದ ರಕ್ಷಣೆ ನಿನ್ನೆ ಮೊನ್ನೆ ಆರಂಭವಾದ ಕೆಲಸವಲ್ಲ. ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಯೋಜನೆಗಳಿಂದ ಸ್ವಾಭಿಮಾನದ ಜೀವನ ನಡೆಸುವಂತೆ ಆದ ಅಂದಿನ ಜನರು ಇಂದಿರಾ ಗಾಂಧಿಯನ್ನು ತಾಯಿ ಎಂದು ಕರೆಯುತ್ತಿದ್ದರು.‌ ಮನೆಯಲ್ಲಿ ಅವರ ಪೋಟೊ ಇಟ್ಟು ಪೂಜಿಸುತ್ತಿದ್ದರು ಎಂದು ಹೇಳಿದರು.

ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿ ಕಿರಣ್ ಪುಣಚ ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮುಹಮ್ಮದ್, ಮಂಜುಳಾ ಮಾವೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಾಜಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಉಪಸ್ಥಿತರಿದ್ದರು.

ಬಂಟ್ವಾಳ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಜಗದೀಶ್  ಕೊಯಿಲ, ಬಾಲಕೃಷ್ಣ ಶೆಟ್ಟಿ ಕೋಡಾಜೆ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News