ಏರ್‌ಕ್ರಾಫ್ಟ್ ಡಿಸೈನ್ ಸ್ಪರ್ಧೆಯನ್ನು ಗೆದ್ದ ಎಂಐಟಿಯ ವಿದ್ಯಾರ್ಥಿಗಳು

Update: 2020-10-31 15:20 GMT

ಉಡುಪಿ, ಅ.31: ಕೊಯಮತ್ತೂರಿನ ಕುಮಾರಗುರು ಕಾಲೇಜ್ ಆಫ್ ಟೆಕ್ನಾಲಜಿಯ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗ, ಕುಮಾರಗುರು ಸೆಂಟರ್ ಫಾರ್ ಇಂಡಸ್ಟ್ರೀಯಲ್ ರಿಸರ್ಚ್ ಎಂಡ್ ಇನ್ನೊವೇಷನ್ (ಕೆಸಿ. ಐಆರ್‌ಐ) ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ (ಇಂಡಿಯಾ) ವತಿಯಿಂದ ಇತ್ತೀಚೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ಗೌರವಾರ್ಥ ನಡೆದ ‘ಕೆಸಿಟಿ ಏರ್‌ಕ್ರಾಫ್ಟ್ ಡಿಸೈನ್ ಸ್ಪರ್ಧೆ-2020’ರಲ್ಲಿ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ತಂಡ ಅಗ್ರಪ್ರಶಸ್ತಿಯನ್ನು ಗೆದ್ದುಕೊಂಡಿತು.

ರಾಷ್ಟ್ರೀಯ ಮಟ್ಟದಲ್ಲಿ ದೇಶದ ಇಂಜಿನಿಯರಿಂಗ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ ಈ ಮುಕ್ತ ಸ್ಪರ್ಧೆಯಲ್ಲಿ 3000ರಿಂದ 5000 ಕಿ.ಮೀ. ಹಾರುವ ಸಾಮರ್ಥ್ಯದ ವಾಣಿಜ್ಯ ಪ್ರಯಾಣಿಕ ವಿಮಾನ ಅಥವಾ ಬ್ಯುಸಿನೆಸ್ ಜೆಟ್‌ನ ವಿನ್ಯಾಸವನ್ನು ಪ್ರದರ್ಶಿಸಬೇಕಿತ್ತು. ಇದರಲ್ಲಿ ವಿಮಾನ ಸುರಕ್ಷಿತೆ ಹಾಗೂ ಕನಿಷ್ಠ ಮಾಲಿನ್ಯಕ್ಕೆ ಹೆಚ್ಚಿನ ಒತ್ತು ನೀಡಲು ಸೂಚಿಸ ಲಾಗಿತ್ತು.

ಮಣಿಪಾಲ ಎಂಐಟಿಯ ಮೂರನೇ ವರ್ಷದ ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ‘ಪ್ರವಾಹ್’ ಇದರಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಎಂಐಟಿ ತಂಡ ನೇಹಿ ಸಿನ್ಹಾ, ಶ್ರದ್ಧಾ ಶೇಷಾದ್ರಿ, ಪ್ರಣವ್ ಗುಪ್ತ ಹಾಗೂ ವೇದಾಂಗ್ ಪ್ರದೀಪ್ ಅವರನ್ನೊಳಗೊಂಡಿತ್ತು.
ಹೊಸ ತಲೆಮಾರಿನ, ಭವಿಷ್ಯದ 11 ಪ್ರಯಾಣಿಕರ ಮಧ್ಯಮಗಾತ್ರದ ಸೂಪರ್ ಬ್ಯುಸಿನೆಸ್ ಜೆಟ್‌ನ್ನು ಇವರು ವಿನ್ಯಾಸಗೊಳಿಸಿದ್ದು, ಇದರಲ್ಲಿ ಪ್ರಯಾಣಿಕರ ಸುರಕ್ಷತೆ, ಐಷಾರಾಮ ಹಾಗೂ ಕನಿಷ್ಠ ಮಾಲಿನ್ಯತೆಗೆ ಗರಿಷ್ಠ ಆದ್ಯತೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News