‘ಇಂದಿರಾ ಗಾಂಧಿ ಸಾಧನೆ, ತ್ಯಾಗ, ಬಲಿದಾನ ಮರೆತ ಯುವ ಪೀಳಿಗೆ’ : ಗೀತಾ ವಾಗ್ಳೆ

Update: 2020-10-31 15:21 GMT

ಉದ್ಯಾವರ, ಅ.31: ಸ್ವತಂತ್ರ ಭಾರತದ ಏಕೈಕ ಮಹಿಳಾ ಪ್ರಧಾನಿಯಾಗಿ ದಿಟ್ಟ ಸವಾಲುಗಳನ್ನು ಎದುರಿಸಿ, ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ತಂದು ನಿಲ್ಲಿಸಿದ ಇಂದಿರಾ ಗಾಂಧಿ ಅವರ ಸಾಧನೆಗಳು, ತ್ಯಾಗ ಹಾಗೂ ಬಲಿದಾನವನ್ನು ಇಂದಿನ ಯುವಪೀಳಿಗೆ ಮರೆತಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ವಿಷಾಧ ವ್ಯಕ್ತಪಡಿಸಿದ್ದಾರೆ.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಶನಿವಾರ ಉದ್ಯಾವರದಲ್ಲಿ ನಡೆದ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಜನ್ಮದಿನಾಚರಣೆ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಇಂದಿರಾಜಿ ಅವರ ಹಸಿರುಕ್ರಾಂತಿ, ಶ್ವೇತಕ್ರಾಂತಿ, ನೀಲಕ್ರಾಂತಿ ಕಾರ್ಯಕ್ರಮ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಜೀತಪದ್ದತಿ ನಿರ್ಮೂಲನ, ರಾಜಧನ ರದ್ದತಿ ಇವೆಲ್ಲಾ ದೇಶದ ಬಡ ಹಾಗೂ ಮಧ್ಯಮ ವರ್ಗದ ಆರ್ಥಿಕತೆಗೆ ಬಲ ನೀಡಿತು. ಓರ್ವ ಪ್ರಧಾನಿಯಾಗಿ ಅವರು ಕೈಗೊಂಡ ದಿಟ್ಟ ನಿಲುವು ಇಂದು ದೇಶವನ್ನು ಅಖಂಡವಾಗಿ ಉಳಿಸುವಲ್ಲಿ ಪೂರಕವಾಗಿತ್ತು. ಆದರೆ ಇಂದಿರಾ ಗಾಂಧಿ ಅವರಿಂದಲೇ ಆರ್ಥಿಕವಾಗಿ ಬಲಾಢ್ಯ ಗೊಂಡ ವರ್ಗವೊಂದು ಇಂದು ಇಂದಿರಾ ಗಾಂಧಿ ಕಾರ್ಯಕ್ರಮವನ್ನೇ ಗೇಲಿ ಮಾಡುತ್ತಿರುವುದು ಈ ದೇಶದ ದುರಂತ ಎಂದವರು ಹೇಳಿದರು.

ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಕ್ಕೆ ದಾರ್ಮಿಕ ಸ್ವಾತಂತ್ರ ವನ್ನು ಶ್ರೀನಾರಾಯಣ ಗುರುಗಳು ತಂದು ಕೊಟ್ಟರೆ, ಆರ್ಥಿಕ ಸ್ವಾತಂತ್ರ್ಯವನ್ನ ತಂದು ಕೊಟ್ಟವರು ಇಂದಿರಾ ಗಾಂಧಿ ಎಂದರು.

ಕಾಂಗ್ರೆಸ್ ಕಾರ್ಯಕರ್ತ ಕುಮಾರ್ ಸಂಪಿಗೆನಗರ ಸರ್ದಾರ್ ವಲ್ಲಭಬಾಯಿ ಪಟೇಲ್ ಬಗ್ಗೆ ಮಾತನಾಡಿ ಭಾರತದ ಏಕೀಕರಣದ ರೂವಾರಿ ಎನಿಸಿದ ಉಕ್ಕಿನ ಮನುಷ್ಯನ ದೇಶ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿತೇಶ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಲನ್ ಫೆರ್ನಾಂಡಿಸ್, ಅಲ್ಪಸಂಖ್ಯಾತ ಘಟಕದ ಮಹಮ್ಮದ್ ಇರ್ಫಾನ್, ಕಿಸಾನ್ ಘಟಕದ ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್, ಗ್ರಾಪಂನ ಮಾಜಿ ಉಪಾಧ್ಯಕ್ಷ ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಯ್ಸೆ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್‌ಸಿ,ಎಸ್‌ಟಿ ಘಟಕದ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News