ಅಮಿತ್ ಪಾಂಗಾಲ್, ಸಂಜೀತ್‌ಗೆ ಚಿನ್ನ

Update: 2020-10-31 18:46 GMT

ನಾಂಟೆಸ್(ಫ್ರಾನ್ಸ್), ಅ.31: ಕೊರೋನ ವೈರಸ್ ಸೋಂಕು ಹರಡುವಿಕೆಯ ಕಾರಣಕ್ಕಾಗಿ ಬಲವಂತದ ವಿರಾಮದ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ ಅಮಿತ್ ಪಾಂಗಲ್ (52 ಕೆ.ಜಿ.) ಮತ್ತು ಸಂಜೀತ್ (91 ಕೆ.ಜಿ.) ತಮ್ಮ ಮೊದಲ ಸ್ಪರ್ಧೆಯಲ್ಲಿ ಚಿನ್ನ ಬಾಚಿಕೊಂಡಿದ್ದಾರೆ.

ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನಡೆದ ಅಲೆಕ್ಸಿಸ್ ವ್ಯಾಸ್ಟೈನ್ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪಾಂಗಲ್ ಮತ್ತು ಸಂಜೀತ್ ಯಶಸ್ಸು ಸಾಧಿಸಿದ್ದಾರೆ.

ಏಶ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಅಮಿತ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಅಮೆರಿಕದ ರೆನೆ ಅಬ್ರಹಾಂ ಅವರನ್ನು 3-0 ಅಂತರದಲ್ಲಿ ಸೋಲಿಸಿ ಚಿನ್ನ ಪಡೆದರು.

  ಮಾಜಿ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್ ಅವರು ಫ್ರಾನ್ಸ್‌ನ ಸೊಹೆಬ್ ಬೌಫಿಯಾ ಅವರನ್ನು ಮಣಿಸಿ ಚಿನ್ನ ಗೆದ್ದರು.

 75 ಕೆ.ಜಿ. ವಿಭಾಗದಲ್ಲಿ ಏಶ್ಯನ್ ಬೆಳ್ಳಿ ವಿಜೇತ ಆಶಿಶ್ ಕುಮಾರ್ ಅವರು ತನ್ನ ಎದುರಾಳಿ ಅಮೆರಿಕನ್ ಜೋಸೆಫ್ ಜೆರೋಮ್ ಹಿಕ್ಸ್ ಗಾಯದಿಂದಾಗಿ ವಾಕ್‌ಓವರ್ ನೀಡಿದ ನಂತರ ಚಿನ್ನ ಗೆದ್ದರು.

  ಆದಾಗ್ಯೂ ಏಶ್ಯನ್ ಬೆಳ್ಳಿ ಪದಕ ವಿಜೇತ ಕವಿಂದರ್ ಸಿಂಗ್ ಬಿಶ್ತ್ (57 ಕೆ.ಜಿ.) 1-2 ಅಂತರದಲ್ಲಿ ಸ್ಥಳೀಯ ಸ್ಯಾಮ್ಯುಯೆಲ್ ಕಿಸ್ಟೋಹರಿ ಎದುರು ಸೋಲು ಅನುಭವಿಸಿ ನಂತರ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ನಾಲ್ಕು ಬಾರಿ ಏಶ್ಯನ್ ಪದಕ ವಿಜೇತ ಶಿವ ಥಾಪಾ (63 ಕೆ.ಜಿ.), ಸುಮಿತ್ ಸಾಂಗ್ವಾನ್ (81 ಕೆ.ಜಿ.) ಮತ್ತು ಸತೀಶ್ ಕುಮಾರ್ (+91 ಕೆ.ಜಿ.) ಸೆಮಿಫೈನಲ್ ಹಂತದಲ್ಲಿ ಸೋತು ಕಂಚು ಪಡೆದರು.

ಮಾರ್ಚ್‌ನಲ್ಲಿ ಜೋರ್ಡಾನ್‌ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳ ನಂತರ ಭಾರತದ ಬಾಕ್ಸರ್‌ಗಳು ಭಾಗವಹಿಸಿದ ಮೊದಲ ಅಂತರ್‌ರಾಷ್ಟ್ರೀಯ ಸ್ಪರ್ಧೆ ಇದಾಗಿದೆ. ಭಾರತದ ಐದು ಪುರುಷ ಮತ್ತು ನಾಲ್ಕು ಮಹಿಳಾ ಬಾಕ್ಸರ್‌ಗಳು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಲಿಂಪಿಕ್ಸ್‌ನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಇದೀಗ ಭಾರತದ ಬಾಕ್ಸರ್‌ಗಳ ತಂಡ ಯುರೋಪ್‌ನಲ್ಲಿ 52 ದಿನಗಳ ತರಬೇತಿ ಪ್ರವಾಸದಲ್ಲಿದೆ. ಅಕ್ಟೋಬರ್ 15ರಂದು ಬಾಕ್ಸರ್‌ಗಳು ಮತ್ತು ಅವರ ಸಹಾಯಕ ಸಿಬ್ಬಂದಿ ಪ್ರವಾಸ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News