ಮಲಾರ್ ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಕೊಲೆ: ಇರಾದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ

Update: 2020-11-01 03:42 GMT

ಕೊಣಾಜೆ, ನ.1: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್ ಅರಸ್ತಾನದ ಮನೆಯಿಂದ ನಾಪತ್ತೆಯಾಗಿದ್ದ ಹಿರಿಯ ವ್ಯಕ್ತಿಯೊಬ್ಬರ ಮೃತದೇಹ ಕೊಲೆಗೈದು ಇರಾ ಸಮೀಪದ ಗುಡ್ಡವೊಂದರಲ್ಲಿ‌ ಹೂತು ಹಾಕಿದ್ದ ಸ್ಥಿತಿಯಲ್ಲಿ  ಪತ್ತೆಯಾಗಿದೆ.

ಮಲಾರ್ ಅರಸ್ತಾನದ ಪಲ್ಲಿಯಬ್ಬ ಯಾನೆ‌ ಪಲ್ಲಿಯಾಕ (70) ಕೊಲೆಯಾದವರು. ಗಾಂಜಾ ವ್ಯಸನಿಗಳ‌ ತಂಡವೊಂದು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

  ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದು, ಹಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

         ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಮೇಲ್ನೊಟಕ್ಕೆ ತಿಳಿದು ಬಂದಿದ್ದು,  ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪಲ್ಲಿಯಬ್ಬ ಅವರು ಗುರುವಾರ ಸಂಜೆಯಿಂದ ಕಾಣೆಯಾಗಿದ್ದರು. ಶುಕ್ರವಾರ‌‌ ಮಧ್ಯಾಹ್ನದವರೆಗೂ ಇವರ ಮೊಬೈಲ್ ರಿಂಗ್ ಆಗುತ್ತಿತ್ತು. ಬಳಿಕ‌ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಪಲ್ಲಿಯಬ್ಬ ಅವರ ಸಂಬಂಧಿಕರು ಇಬ್ಬರು ಶಂಕಿತರನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

 ದುಷ್ಕರ್ಮಿಗಳು ಪಲ್ಲಿಯಬ್ಬ ಯಾನೆ‌ ಪಲ್ಲಿಯಾಕರನ್ನು ಕಂಚಿನಡ್ಕ ಪ್ರದೇಶದಲ್ಲಿ ಕೊಲೆಗೈದು ಬಳಿಕ ಇರಾ ಪದವು ಬಳಿ ಹೂತಿದ್ದರು ಎನ್ನಲಾಗಿದೆ.

 ರವಿವಾರ ಮುಂಜಾನೆ  ಇರಾ ಪ್ರದೇಶದ ಪದವು ಬಳಿ ಮೃತದೇಹ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಂಟ್ವಾಳ ಹಾಗೂ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News