​ಆಲೂಗಡ್ಡೆ ದರ ಏರಿಕೆ ಈರುಳ್ಳಿಗಿಂತಲೂ ಅಧಿಕ!

Update: 2020-11-01 04:10 GMT

ಹೊಸದಿಲ್ಲಿ, ನ.1: ದೇಶದಲ್ಲಿ ಗೋಧಿ ಹೊರತುಪಡಿಸಿದರೆ ಅಗತ್ಯ ಆಹಾರ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆ ಕಳೆದ ಒಂದು ವರ್ಷದಲ್ಲಿ ಗಣನೀಯ ಏರಿಕೆಯಾಗಿದೆ. ಆಲೂಗಡ್ಡೆ ದರ ಅತಿಹೆಚ್ಚು ಏರಿಕೆಯಾಗಿದ್ದು, ಒಂದು ವರ್ಷದಲ್ಲಿ ಶೇಕಡ 92ರಷ್ಟು ಹೆಚ್ಚಿದೆ. ಶೇಕಡ 44ರಷ್ಟು ಬೆಲೆ ಏರಿಕೆ ಆಗಿರುವ ಈರುಳ್ಳಿ ಎರಡನೇ ಸ್ಥಾನದಲ್ಲಿದೆ. ಈ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಪೂರೈಕೆ ಹೆಚ್ಚಿದ ತಕ್ಷಣ ಬೆಲೆ ಯಥಾಸ್ಥಿತಿಗೆ ಬರಲಿದೆ ಎಂದು ತಜ್ಞರು ಹೇಳಿದರೂ, ಅತ್ಯಧಿಕ ಆಹಾರ ಹಣದುಬ್ಬರಕ್ಕೆ ಜನಸಾಮಾನ್ಯರು ತತ್ತರಿಸಿದ್ದಾರೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಸರಾಸರಿ ಸಗಟು ಬೆಲೆ ಕಳೆದ ಒಂದು ವರ್ಷದಲ್ಲಿ ಶೇಕಡ 108ರಷ್ಟು ಹೆಚ್ಚಳ ದಾಖಲಿಸಿದ್ದು, ಕ್ವಿಂಟಾಲ್‌ಗೆ 1,739ರಿಂದ 3,633ಕ್ಕೇರಿದೆ. ಈರುಳ್ಳಿ ಬೆಲೆ ಕ್ವಿಂಟಲ್‌ಗೆ 5,645 ರೂಪಾಯಿ ಆಗಿದ್ದು, ಇದು ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಶೇಕಡ 47ರಷ್ಟು ಅಧಿಕ.

ಭಾರತೀಯ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಈ ಎರಡರ ಜತೆಗೆ ಬೇಳೆಕಾಳುಗಳ ಬೆಲೆ ಕೂಡಾ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಿದೆ. ಕಳೆದ ಕೆಲ ತಿಂಗಳುಗಳಿಂದ ಆಹಾರ ಹಣದುಬ್ಬರ ಹೆಚ್ಚಳ ಒಟ್ಟಾರೆ ಹಣದುಬ್ಬರ ಹೆಚ್ಚಳಕ್ಕೂ ಕಾರಣವಾಗಿದೆ. ಐದು ವರ್ಷಗಳ ಹಿಂದಿನ ಅಂಕಿ ಸಂಖ್ಯೆಗೆ ಹೋಲಿಸಿದರೆ ಆಲೂಗಡ್ಡೆ ಬೆಲೆ ಶೇಕಡ 158ರಷ್ಟು ಏರಿಕೆ ಕಂಡಿದೆ. ಪ್ರತಿ ಕೆಜಿಗೆ 16.7 ರೂಪಾಯಿ ಇದ್ದುದು ಇದೀಗ 43 ರೂಪಾಯಿಗೆ ಹೆಚ್ಚಿದೆ. ಅಲೂಗಡ್ಡೆ ಬೆಲೆ ಇನ್ನಷ್ಟು ಹೆಚ್ಚಿದರೆ ದಾಸ್ತಾನಿಗೆ ಮಿತಿ ಹೇರುವ ಅವಕಾಶ ಸರಕಾರಕ್ಕಿದೆ. ಆದರೆ ಇದಕ್ಕೂ ಮುನ್ನ ಬೆಲೆ ಏರಿಕೆ ತಡೆಗೆ ಆಲೂಗಡ್ಡೆ ಆಮದು ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ದೇಶದಲ್ಲಿ ತರಕಾರಿ, ಮಾಂಸ, ಮೀನು ಮತ್ತು ಬೇಳೆಕಾಳುಗಳ ಬೆಲೆ ಗಣನೀಯವಾಗಿ ಹೆಚ್ಚಿದೆ.

ಹಣದುಬ್ಬರ ಏರಿಕೆ ತಡೆಯುವ ಕ್ರಮವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರ ಕಡಿತವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. "ಹಲವು ತಿಂಗಳುಗಳಿಂದ ಹಣದುಬ್ಬರ ಪ್ರಮಾಣ ಸಹಿಸಿಕೊಳ್ಳುವ ಮಟ್ಟಕ್ಕಿಂತ ಅಧಿಕ ಇದ್ದು, ವಿತ್ತೀಯ ನೀತಿ ಸಮಿತಿ ನಿರ್ಧರಿಸಿರುವಂತೆ ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಆಘಾತ ಇದಕ್ಕೆ ಮುಖ್ಯ ಕಾರಣ. ದೇಶದ ಆರ್ಥಿಕತೆ ಅನ್‌ಲಾಕ್ ಆಗುತ್ತಿದ್ದಂತೆ ಮುಂಬರುವ ತಿಂಗಳುಗಳಲ್ಲಿ ಇದು ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ" ಎಂದು ಎಂಪಿಸಿ ಹೇಳಿಕೆ ನೀಡಿತ್ತು.

ಟೊಮ್ಯಾಟೊ, ಆಲೂಗಡ್ಡೆ ಮತ್ತು ಈರುಳ್ಳಿಯಂಥ ಪ್ರಮುಖ ತರಕಾರಿಗಳ ಬೆಲೆ ಮೇಲೆ ಒತ್ತಡ ಇದ್ದು, ಮೂರನೇ ತ್ರೈಮಾಸಿಕದಲ್ಲಿ ಪೂರೈಕೆ ಸರಿಯಾಗುವ ಮೂಲಕ ಇದು ನಿವಾರಣೆಯಾಗಲಿವೆ ಎಂದು ಕೇಂದ್ರೀಯ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಇನ್ನೊಂದೆಡೆ ಆಮದು ಸುಂಕವನ್ನು ಹೆಚ್ಚಿಸಿರುವ ಕಾರಣದಿಂದ ಬೇಳೆಕಾಳು ಮತ್ತು ಎಣ್ಣೆಬೀಜ ಬೆಲೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ಆರ್‌ಬಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News