ಭಾರತದಲ್ಲಿ ಜಾತ್ಯತೀತತೆ ಅಪಾಯದಲ್ಲಿದೆ: ಶಶಿ ತರೂರ್

Update: 2020-11-01 04:38 GMT

ಹೊಸದಿಲ್ಲಿ, ನ.1: ಭಾರತದಲ್ಲಿ ತತ್ವ ಹಾಗೂ ಆಚರಣೆ ಎನಿಸಿರುವ ಜಾತ್ಯತೀತತೆ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. 

ಆಡಳಿತ ವರ್ಗ ’ಜಾತ್ಯತೀತ’ ಪದವನ್ನು ಸಂವಿಧಾನದಿಂದ ಕಿತ್ತುಹಾಕಲೂ ಪ್ರಯತ್ನಿಸುತ್ತಿದೆ ಎಂದು ಅವರು ಶನಿವಾರ ಗಂಭೀರ ಆರೋಪ ಮಾಡಿದರು. ಆದರೆ ದ್ವೇಷಕಾರಕ ಶಕ್ತಿಗಳು ದೇಶದ ಜಾತ್ಯತೀತ ಲಕ್ಷಣವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತರೂರ್ ಅವರ ಹೊಸ ಕೃತಿ 'ದ ಬ್ಯಾಟಲ್ ಆಫ್ ಬಿಲಾಂಗಿಂಗ್' ಬಿಡುಗಡೆ ಹಿನ್ನೆಲೆಯಲ್ಲಿ ಪಿಟಿಐ ನಡೆಸಿದ ವಿಶೇಷ ಸಂದರ್ಶನದಲ್ಲಿ, "ಜಾತ್ಯತೀತತೆ ಎನ್ನುವುದು ಕೇವಲ ಒಂದು ಶಬ್ದ. ಅದನ್ನು ಸರಕಾರ ಸಂವಿಧಾನದಿಂದ ಹೊರತೆಗೆದರೂ, ನಮ್ಮ ಸಂವಿಧಾನ ಮಾತ್ರ ತನ್ನ ಮೂಲ ಸಂರಚನೆಯ ಕಾರಣದಿಂದಾಗಿ ಜಾತ್ಯತೀತ ಸಂವಿಧಾನವಾಗಿಯೇ ಮುಂದುವರಿಯಲಿದೆ" ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್ ಪಕ್ಷವು 'ಬಿಜೆಪಿ ಲೈಟ್' ಆಗುವ ದುಸ್ಸಾಹಸಕ್ಕೆ ಕೈಹಾಕಬಾರದು; ಹಾಗೆ ಮಾಡಿದರೆ 'ಕಾಂಗ್ರೆಸ್ ಝೀರೋ' ಆಗುವ ಅಪಾಯವಿದೆ. ಬಿಜೆಪಿಯ ರಾಜಕೀಯದ ಮ್ರದು ಅವತಾರ ಆಗುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುವುದಿಲ್ಲ ಹಾಗೂ ಭಾರತದ ಜಾತ್ಯತೀತತೆಯ ಸ್ಫೂರ್ತಿ ನಮ್ಮ ಪಕ್ಷದಲ್ಲಿ ಜೀವಂತ ಹಾಗೂ ಚೆನ್ನಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮೃದು ಹಿಂದುತ್ವದತ್ತ ವಾಲುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬಗ್ಗೆ ಗಮನ ಸೆಳೆದಾಗ, "ಕಾಂಗ್ರೆಸ್ ಪಕ್ಷದ ನೀತಿ ಸ್ಪಷ್ಟವಾಗಿದ್ದು, ನಾವು ಬಿಜೆಪಿ ಲೈಟ್ ಆಗಲು ಅಗಲು ಅವಕಾಶ ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News