ಪ್ರೊ. ಬಿಳಿಮಲೆ ಭಾಗವಹಿಸಬೇಕಿದ್ದ ತುಳು ಗೋಷ್ಠಿ ರದ್ದು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

Update: 2020-11-01 07:25 GMT
ಪ್ರೊಫೆಸರ್ ಡಾ.ಪುರುಷೋತ್ತಮ ಬಿಳಿಮಲೆ

ಮಂಗಳೂರು, ನ.1: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಇಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ತುಳುಗೋಷ್ಠಿ ರದ್ದುಗೊಂಡಿರುವ ಕಾರಣದ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತುಳು ವಿಚಾರಗೋಷ್ಠಿಗೆ ದಿಲ್ಲಿ ಜೆಎನ್‌ಯು ನಿವೃತ್ತ ಪ್ರೊಫೆಸರ್ ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಆಹ್ವಾನಿಸಲಾಗಿದ್ದು, ವಿವಿ ಸಿಂಡಿಕೇಟ್‌ನ ಸದಸ್ಯರೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿರೋಧ ವ್ಯಕ್ತಪಡಿಸಿದ ಸದಸ್ಯರ ಹೆಸರು ಬಹಿರಂಗಪಡಿಸಬೇಕು ಹಾಗೂ ಗೋಷ್ಠಿಯನ್ನು ರದ್ದು ಮಾಡಲು ನಿರ್ಧರಿಸಿದವರ ಹೆಸರನ್ನೂ ಬಹಿರಂಗಪಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ನಗರದ ಖ್ಯಾತ ವೈದ್ಯ ಹಾಗೂ ಪ್ರಗತಿಪರ ಚಿಂತಕರೂ ಆಗಿರುವ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಮುನೀರ್ ಕಾಟಿಪಳ್ಳ ಮೊದಲಾದವರು ಈ ಕುರಿತು ಫೇಸ್‌ಬುಕ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವರ ಅಭಿಪ್ರಾಯಕ್ಕೆ ಪೂರಕವಾಗಿ ಹಲವಾರು ಚಿಂತಕರು, ಪ್ರಗತಿಪರರು ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

''ನಮ್ಮ ಮಂಗಳೂರು ವಿಮಾನ ನಿಲ್ದಾಣವನ್ನು ಮಾರಿದ್ದರ ಬಗ್ಗೆ ವಿರೋಧ ಇಲ್ಲ, ಆದರೆ ಬಿಳಿಮಲೆ ಸರ್ ಭಾಗವಹಿಸುತ್ತಾರೆ ಅನ್ನೋದಕ್ಕೆ ವಿರೋಧ'' ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ''ವಿರೋಧಿಸಿದ ಸಿಂಡಿಕೇಟ್ ಸದಸ್ಯರು ಯಾರು ಎಂದು ತಿಳಿದರೆ ಅವರ ಮೇಲೆ ಕ್ರಮ ಕೈಗೊಳ್ಳುವಿರಾ'' ಎಂದು ಮತ್ತೋರ್ವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರನ್ನು ಪ್ರಶ್ನಿಸಿದ್ದಾರೆ.


 ಗೋಷ್ಠಿ ರದ್ದಾಗಿಲ್ಲ, ಮುಂದೂಡಲಾಗಿದೆ: ಮಂಗಳೂರು ವಿವಿ ಕುಲಪತಿ ಸ್ಪಷ್ಟನೆ

ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ‘‘ತುಳುಗೋಷ್ಠಿ ಕಾರ್ಯಕ್ರಮ ರದ್ದಾಗಿಲ್ಲ. ತಾಂತ್ರಿಕ ಆಡಚಣೆಯ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿಕೆ ಮಾಡಲಾಗಿದೆ’’ ಎಂದು ಹೇಳಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News