ಕನ್ನಡ -ತುಳು ಭಾಷೆಗಳನ್ನು ಒಟ್ಟಾಗಿ ಬೆಳೆಸುವುದು ಎಲ್ಲರ ಕರ್ತವ್ಯ: ಡಿಸಿ ಜಿ.ಜಗದೀಶ್
ಉಡುಪಿ, ನ.1: ಉಡುಪಿ ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನ ಭಾಗವಾಗಿ ಗುರುತಿಸಿಕೊಂಡಿದ್ದು, ತುಳು ಇಲ್ಲಿನ ಆಡು ಭಾಷೆಯಾದರೂ ಆಡಳಿತ ಮತ್ತು ಶಿಕ್ಷಣದ ಭಾಷೆಯಾಗಿ ಕನ್ನಡವನ್ನೇ ಇಲ್ಲಿನ ಜನ ಬಳಸುತ್ತಿದ್ದಾರೆ. ಈ ದೃಷ್ಠಿಯಿಂದ ತುಳು ಮತ್ತು ಕನ್ನಡ ಎರಡು ಕಣ್ಣುಗಳಿದ್ದಂತೆ. ಈ ಎರಡು ಭಾಷೆಗಳನ್ನು ಒಟ್ಟಾಗಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಅವರು ಸಂದೇಶ ನೀಡಿದರು.
ಇಂದು ಕನ್ನಡ ಭಾಷಾ ಪ್ರಾಂತ್ಯ ಸ್ಥಾಪನೆಗಾಗಿ ಯಾವುದೇ ಹೋರಾಟಗಳ ಅಗತ್ಯ ಇಲ್ಲ. ಅದರ ಬದಲು ಕನ್ನಡ ಭಾಷೆಯನ್ನು ಬೆಳೆಸಿ ಅಭಿವೃದ್ಧಿಪಡಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ನಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು ಆಗಿದೆ. ಆಧುನಿಕ ಯುಗದಲ್ಲಿ ನಾಡಿನ ಜನ ತಮ್ಮ ಭಾಷಾ ಸ್ವಾಭಿಮಾನವನ್ನು ತೊರೆದು ಅನ್ಯ ಭಾಷೆಗಳತ್ತ ವಾಲುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದರು.
ಜಿಲ್ಲೆಯ ಪ್ರವಾಸೋದ್ಯಮದ ದೃಷ್ಟಿಯಿಂದ ಪಡುಬಿದ್ರಿ ಎಂಡ್‌ಪಾಯಿಂಟ್ ಬೀಚ್‌ಗೆ ದೊರೆತಿರುವ ಅಂತಾರಾಷ್ಟ್ರೀಯ ಮಾನ್ಯತೆಯು ಜಿಲ್ಲೆಯ ಇತರ ಬೀಚ್‌ಗಳಿಗೂ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಾಚರಿಸುತ್ತಿದೆ. ಬೈಂದೂರು, ಯಡ್ತರೆ ಹಾಗೂ ಪಡುವರಿ ಗ್ರಾಮಗಳನ್ನು ಒಳಗೊಂಡ ಗ್ರಾಪಂ ಪ್ರದೇಶವನ್ನು ಪಟ್ಟಣ ಪಂಚಾಯತ್‌ಯನ್ನಾಗಿ ಸರಕಾರ ಮೇಲ್ದರ್ಜೆಗೇರಿಸಿರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೊಸ ಮೈಲಿಗಲ್ಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರದಿಂದ ಅನುಮೋದನೆ ದೊರೆತಿದ್ದು, ಈ ಮೂಲಕ ಸರಕಾರದಿಂದ ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಮತ್ತು 250 ಬೆಡ್, ಆಸ್ಪತ್ರೆಗೆ ಬೇಕಾದಷ್ಟು 197 ಸಿಬ್ಬಂದಿ, ಪೀಠೋಪಕರಣ ದೊರಕುವಂತಾಗಿದೆ. ಇದರಿಂದ ಜನರಿಗೆ ಇನ್ನು ಹೆಚ್ಚಿನ ಹಾಗೂ ಉತ್ತಮ ರೀತಿಯಲ್ಲಿ ಆರೋಗ್ಯ ಸೇವೆ ಗಳನ್ನು ನೀಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಸ್ಯಶಾಸ್ತ್ರ ತಜ್ಞ ಡಾ.ಕೆ.ಗೋಪಾಲಕೃಷ್ಣ ಭಟ್, ಯಕ್ಷಗಾನ ಕಲಾವಿದ ಸುದರ್ಶನ ಉರಾಳ ಸೇರಿದಂತೆ ಒಟ್ಟು 40 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪರಿಶಿಷ್ಟ ಜಾತಿಯ ಸ್ಫೂರ್ತಿ ಅಶೋಕ್ ರಾಥೋಡ ಮತ್ತು ಪರಿಶಿಷ್ಟ ಪಂಗಡದ ರಶ್ಮಿತಾ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಲ ಇವರ ಸ್ಮರಣಾರ್ಥ ತಲಾ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡಲಾಯಿತು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಉಡುಪಿ ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸಿಇಓ ಡಾ.ನವೀನ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಎಸ್ಪಿ ವಿಷ್ಣುವರ್ಧನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.