×
Ad

ಕಾರ್ಕಳದ ಅಂತಾರಾಷ್ಟ್ರೀಯ ಅಥ್ಲೀಟ್ ಅಭಿನಯಾ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ ಗೌರವ

Update: 2020-11-01 13:34 IST

ಉಡುಪಿ, ನ.1: ಅಂತಾರಾಷ್ಟ್ರೀಯ ಹೈಜಂಪ್ ಆಟಗಾರ್ತಿ, ಕಾರ್ಕಳ ತಾಲೂಕಿನ ಕುಕ್ಕೆಜೆಯ ಅಭಿನಯಾ ಶೆಟ್ಟಿ(21) ಅವರು ರಾಜ್ಯ ಸರಕಾರ ನೀಡಿರುವ 2019ನೆ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸುಧಾಕರ್ ಶೆಟ್ಟಿ ಹಾಗೂ ಸಂಜೀವಿ ದಂಪತಿಯ ಪುತ್ರಿಯಾಗಿರುವ ಅಭಿನಯಾ ಶೆಟ್ಟಿಯ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಇವರು, ಸದ್ಯ ಮುಂಬೈ ಪಶ್ಚಿಮ ರೈಲ್ವೆಯ ಉದ್ಯೋಗಿಯಾಗಿದ್ದಾರೆ. ವಸಂತ್ ಜೋಗಿ ಏರ್ಮಾಳ್ ಇವರ ಕೋಚ್ ಆಗಿದ್ದಾರೆ.

ಅಭಿನಯಾ ಶ್ರೀಲಂಕಾದ ಕೊಲಂಬೋದಲ್ಲಿ 2018ರ ಮೇ ತಿಂಗಳಲ್ಲಿ ನಡೆದ ಸೌತ್ ಏಶ್ಯನ್ ಜ್ಯುನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು, 2018ರ ಜೂನ್‌ನಲ್ಲಿ ಜಪಾನ್‌ನಲ್ಲಿ ನಡೆದ ಜ್ಯೂನಿಯರ್ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅಲ್ಲದೆ ಇವರು ಇಟಲಿಯಲ್ಲಿ 2019ರಲ್ಲಿ ನಡೆದ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ನಲ್ಲಿಯೂ ಭಾಗವಹಿಸಿದ್ದರು. ಅದೇರೀತಿ ಇವರು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News