ಕುಕ್ಕೆಹಳ್ಳಿ ಯುವತಿಯ ಶಂಕಾಸ್ಪದ ಸಾವು ಪ್ರಕರಣ: ಆರೋಪಿ ಪ್ರಿಯಕರನ ಬಂಧನ
ಉಡುಪಿ, ನ.1: ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್(19) ಸಂಶಯಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರ ಜಡ್ಕಲ್ ಮೂಲದ, ಉಪ್ಪೂರು ನಿವಾಸಿ ಪ್ರಶಾಂತ್ ಕುಂದರ್(24) ಎಂಬಾತನನ್ನು ಉಡುಪಿ ನಗರ ಪೊಲೀಸರು ಅ.31ರಂದು ಬಂಧಿಸಿದ್ದಾರೆ.
ಈತ ರಕ್ಷಿತಾಳ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ್ದು, ನಂತರ ಆಕೆಯ ಅನುಮತಿ ಇಲ್ಲದೆ ಗರ್ಭಪಾತ ಮಾಡಿಸಿದ್ದನು ಮತ್ತು ಆಕೆ ಆತ್ಮಹತ್ಯೆ ಮಾಡುವಂತೆ ಪ್ರಚೋದನೆ ಮಾಡಿರುವುದಾಗಿ ಮೃತಳ ತಂದೆ ಪ್ರಭಾಕರ ನಾಯಕ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದೀಗ ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಕ್ಷಿತಾ ಅ.24ರಂದು ಅಂಬಾಗಿಲಿನಲ್ಲಿರುವ ಬಾಡಿಗೆ ರೂಮಿನಲ್ಲಿ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಆಕೆಯನ್ನು ಪ್ರಶಾಂತ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪರಾರಿ ಯಾಗಿದ್ದನು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ರಕ್ಷಿತಾರ ತಂದೆ ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಶಾಂತ್‌ನನ್ನು ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದರು. ಇದೀಗ ಮತ್ತೆ ಆತನನ್ನು ಬಂಧಿಸಿದ್ದಾರೆ.