ಕ್ರಿಮಿನಲ್ ದಾಖಲೆಗಳನ್ನು ಪ್ರಕಟಿಸದ 104 ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್
ಪಾಟ್ನಾ, ನ.1: ವೃತ್ತಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಒಂದು ಬಾರಿಯೂ ತಮ್ಮ ಕ್ರಿಮಿನಲ್ ದಾಖಲೆಗಳನ್ನು ಪ್ರಕಟಿಸದ ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಕಣದಲ್ಲಿರುವ 104 ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಪೂರ್ವಾಪರಗಳು,ದೋಷನಿರ್ಣಯ,ಬಾಕಿಯಿರುವ ಪ್ರಕರಣಗಳ ಮಾಹಿತಿಗಳನ್ನು ವೃತ್ತಪತ್ರಿಕೆಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂರು ಸಲ ಪ್ರಕಟಿಸಬೇಕಾಗುತ್ತದೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯಕುಮಾರ ಸಿಂಗ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅ.28ರಂದು ಮೊದಲ ಹಂತದ ಮತದಾನ ನಡೆದಿರುವ 71 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 1,066 ಅಭ್ಯರ್ಥಿಗಳ ಪೈಕಿ 327 ಅಭ್ಯರ್ಥಿಗಳು ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾರೆ. ಇವರಲ್ಲಿ 104 ಜನರು ಆಯೋಗದ ಮಾರ್ಗಸೂಚಿ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ.
ಈ ಅಭ್ಯರ್ಥಿಗಳು 48 ಗಂಟೆಗಳಲ್ಲಿ ಶೋಕಾಸ್ ನೋಟಿಸಿಗೆ ಉತ್ತರಿಸಬೇಕಿದೆ,ವಿಫಲರಾದರೆ ಆಯೋಗವು ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಿಂಗ್ ತಿಳಿಸಿದರು.
ಬೀಕನ್ ದೀಪಗಳ ದುರುಪಯೋಗಕ್ಕಾಗಿ 105, ಲೌಡ್‌ಸ್ಪೀಕರ್ ಕಾಯ್ದೆಯ ಉಲ್ಲಂಘನೆಗಾಗಿ 35, ಅಕ್ರಮ ಸಭೆಗಳಿಗಾಗಿ 129, ಮತದಾರರಿಗೆ ಅನುಚಿತ ಸೌಲಭ್ಯಗಳನ್ನು ಒದಗಿಸಿದ್ದಕ್ಕೆ 9 ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ 155 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 1,303 ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, 3,034 ಆಯುಧ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ. ಸಿಆರ್‌ಪಿಸಿ ಮುನ್ನೆಚ್ಚರಿಕೆ ಕಲಮ್‌ಗಳಡಿ ಒಟ್ಟು 3,49,230 ಜನರನ್ನು ನಿರ್ಬಂಧಿಸಲಾಗಿದೆ. ವಾಹನ ತಪಾಸಣೆ ಸಂದರ್ಭಗಳಲ್ಲಿ 4,846 ಜನರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು 19.36 ಕೋ.ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.