ಟ್ರಂಪ್ ರ‍್ಯಾಲಿಗಳಿಂದಾಗಿ 30 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು: ಸಂಶೋಧನಾ ವರದಿ

Update: 2020-11-01 17:32 GMT

ನ್ಯೂಯಾರ್ಕ್, ನ.1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ 18 ಚುನಾವಣಾ ಪ್ರಚಾರ ರ‍್ಯಾಲಿಗಳಿಂದಾಗಿ 30 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನ ವೈರಸ್ ಸೋಂಕು ತಗಲಿದ್ದು, 700ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿರುವ ಸಾಧ್ಯತೆಯಿದೆಯೆಂದು ಅಮೆರಿಕದ ಸ್ಟಾನ್‌ಫರ್ಡ್ ವಿವಿಯ ಸಂಶೋಧಕರು ತಿಳಿಸಿದ್ದಾರೆ.

ಜೂನ್ 20ರಿಂದ ಸೆಪ್ಟೆಂಬರ್ 22ರವರೆಗೆ ಟ್ರಂಪ್ ಅವರು ಕೋರೋನ ಸೋಂಕಿನ ಹಾವಳಿ ತೀವ್ರವಾಗಿರುವ ವಸತಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಿರುವುದು ರೋಗ ಹರಡುವುದಕ್ಕೆ ಕಾರಣವಾಗಿದೆಯೆಂದು ಅಧ್ಯಯನ ವರದಿ ಅಭಿಪ್ರಾಯಿಸಿದೆ.

ಟ್ರಂಪ್ ಬೃಹತ್ ಸಾರ್ವಜನಿಕ ಸಮಾವೇಶಗಳಲ್ಲಿ ಕೋವಿಡ್-19 ಹರಡುವಿಕೆಯ ಅಪಾಯಕ್ಕೆ ಸಂಬಂಧಿಸಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಮುನ್ನೆಚ್ಚರಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿರಲಿಲ್ಲ. ಟ್ರಂಪ್ ಅವರ ರ‍್ಯಾಲಿಗಳು ನಡೆದ ವಸತಿ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಾಲಿಸಲಾಯಿತು. ಇದರಿಂದಾಗಿ ಆ ಪ್ರದೇಶಗಳು ಭಾರೀ ದೊಡ್ಡ ಬೆಲೆಯನ್ನು ತೆರಬೇಕಾಗಿ ಬಂದಿದೆ ಎಂದು ಸಂಶೋಧಕರು ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಟ್ರಂಪ್ ರ‍್ಯಾಲಿಗಳಲ್ಲಿ ಸಾವಿರಾರು ಮಂದಿ, ಕೆಲವೊಮ್ಮೆ ಹತ್ತು ಸಾವಿರಕ್ಕೂ ಅಧಿಕ ಭಾಗವಹಿಸುತ್ತಿದ್ದುದನ್ನು ವರದಿಯು ಬೆಟ್ಟು ಮಾಡಿ ತೋರಿಸಿದೆ.

ಸಂಶೋಧನಾ ವರದಿಯ ಬಗ್ಗೆ ಪ್ರತಿಸ್ಪರ್ಧಿ ಡೆಮಾಕ್ರಾಟಿಕ್ ಅಭ್ಯರ್ಥಿ ಜೊ ಬೈಡನ್ ಪ್ರತಿಕ್ರಿಯಿಸಿದ್ದು, ‘‘ಅಧ್ಯಕ್ಷ ಟ್ರಂಪ್ ಅವರು ನಿಮ್ಮ ಬಗ್ಗೆ ಕಾಳಜಿ ಹೊಂದಿಲ್ಲ. ಅವರು ತನ್ನದೇ ಆದ ಬೆಂಬಲಿಗರ ಬಗೆಗೂ ಕಾಳಜಿ ವಹಿಸುತ್ತಿಲ್ಲ’’ ಎಂದು ಕಟಕಿಯಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News