2021ರ ಎಪ್ರಿಲ್-ಜೂನ್ ಈ ಅವಧಿಯಲ್ಲಿ ಕೊರೋನ ಲಸಿಕೆ ವಿತರಿಸುವ ನಿರೀಕ್ಷೆ ಇದೆ ಎಂದ ಭಾರತ್ ಬಯೊಟೆಕ್

Update: 2020-11-01 17:33 GMT

ಹೊಸದಿಲ್ಲಿ, ನ.1: ಮುಂದಿನ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಕೋವಿಡ್-19 ಲಸಿಕೆಯನ್ನು ವಿತರಿಸುವ ಯೋಜನೆಯಿದೆ ಎಂದು ಭಾರತ್ ಬಯೊಟೆಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿಪ್ರಸಾದ್ ಹೇಳಿದ್ದಾರೆ.

   ದೇಶದ ಔಷಧ ನಿಯಂತ್ರಕ ಪ್ರಾಧಿಕಾರದ ಅನುಮೋದನೆ ದೊರೆತರೆ ಮುಂದಿನ ವರ್ಷದ ದ್ವಿತೀಯ ತ್ರೈಮಾಸಿಕ (ಎಪ್ರಿಲ್‌ನಿಂದ -ಜೂನ್) ಅವಧಿಯಲ್ಲಿ ಕೋವಿಡ್ ಲಸಿಕೆಯನ್ನು ಮಾರುಕಟ್ಟೆಗೆ ಪರಿಚಯಿಸಬಹುದು. ಆದರೆ ಈಗ ಮೂರನೇ ಹಂತದ ಪರೀಕ್ಷಾ ಪ್ರಯೋಗ ನಡೆಸುವ ಬಗ್ಗೆ ಸಂಸ್ಥೆ ಗಮನ ಕೇಂದ್ರೀಕರಿಸಿದೆ. ಕೊವಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್), ರಾಷ್ಟ್ರೀಯ ವೈರಾಣು ಸಂಸ್ಥೆ(ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ) ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ. ಕಳೆದ ಹಂತದ ಪರೀಕ್ಷಾ ಪ್ರಯೋಗದ ವರದಿಯನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದ್ದು ಅವರಿಂದ ಅನುಮೋದನೆ ದೊರಕಿದೊಡನೆ ಮೂರನೇ ಹಂತದ ಪರೀಕ್ಷಾ ಪ್ರಯೋಗ ನಡೆಸಲಾಗುವುದು ಎಂದು ಸಾಯಿಪ್ರಸಾದ್ ಹೇಳಿದ್ದಾರೆ.

  ಮೂರನೇ ಹಂತದ ಪರೀಕ್ಷೆಯನ್ನು ಸುಮಾರು 14 ರಾಜ್ಯಗಳ 25ರಿಂದ 30 ನಗರಗಳಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳಿಗೆ ತಲಾ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಒಂದು ಆಸ್ಪತ್ರೆಯಲ್ಲಿ ಸುಮಾರು 2,000 ಅಭ್ಯರ್ಥಿಗಳು ಪರೀಕ್ಷಾ ಪ್ರಯೋಗಕ್ಕೆ ನೋಂದಾಯಿಸಿಕೊಳ್ಳಬಹುದು. ಲಸಿಕೆ ಅಭಿವೃದ್ಧಿಪಡಿಸಲು 350-400 ಕೋಟಿ ರೂ.ಯಷ್ಟು ಮೊತ್ತವನ್ನು ಹೂಡಿಕೆ ಮಾಡಲಾಗಿದ್ದು ಇದರಲ್ಲಿ ಮುಂದಿನ 6 ತಿಂಗಳು ನಡೆಯಲಿರುವ ತೃತೀಯ ಹಂತದ ಪರೀಕ್ಷಾ ಪ್ರಯೋಗದ ವೆಚ್ಚವೂ ಸೇರಿದೆ.

 ಲಸಿಕೆ ಸಿದ್ಧವಾದ ಬಳಿಕ ಅದನ್ನು ಸರಕಾರಕ್ಕೆ ಮಾತ್ರವಲ್ಲ ಖಾಸಗಿ ಸಂಸ್ಥೆಗಳಿಗೂ ಒದಗಿಸಲಾಗುವುದು. ಅಲ್ಲದೆ, ರಫ್ತು ಮಾಡುವ ಬಗ್ಗೆ ಕೆಲವು ದೇಶಗಳೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ. ಲಸಿಕೆಯ ದರವನ್ನು ಇದುವರೆಗೆ ನಿಗದಿಗೊಳಿಸಿಲ್ಲ. ಲಸಿಕೆಯ ಉತ್ಪಾದನೆ ಆರಂಭವಾದಾಗ ತಗುಲಿದ ಒಟ್ಟು ವೆಚ್ಚವನ್ನು ಪರಿಗಣಿಸಿ ದರ ನಿಗದಿಗೊಳಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News