ನೇಪಾಳ: ಆಡಳಿತ ಪಕ್ಷ ವಿಭಜನೆ ಸುಳಿವು ನೀಡಿದ ಪ್ರಧಾನಿ

Update: 2020-11-02 04:06 GMT
ಕೆ.ಪಿ.ಶರ್ಮಾ ಓಲಿ

ಕಠ್ಮಂಡು: ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಮತ್ತೆ ಸಂಘರ್ಷ ತಲೆದೋರಿದೆ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತು ಅವರ ಕಟ್ಟಾ ವಿರೋಧಿ ಪುಷ್ಪ ಕಮಾಲ್ ದಹಾಲ್ ಪ್ರಚಂಡ ನಡುವಿನ ಮಾತುಕತೆ ಬಳಿಕ, ಆಡಳಿತ ಪಕ್ಷ ವಿಭಜಿಸುವ ಬಗ್ಗೆ ಪ್ರಧಾನಿ ಸುಳಿವು ನೀಡಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಪ್ರಕಟಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಇದ್ದ ಭಿನ್ನಾಭಿಪ್ರಾಯವನ್ನು ಓಲಿ ಮತ್ತು ಪ್ರಚಂಡ ಬಗೆಹರಿಸಿಕೊಂಡಿದ್ದರು. ಇದರೊಂದಿಗೆ ಪಕ್ಷದಲ್ಲಿ ಹಲವು ತಿಂಗಳುಗಳಿಂದ ಇದ್ದ ಭಿನ್ನಮತ ಕೊನೆಗೊಂಡಿತ್ತು.

ಓಲಿ ಪಕ್ಷಾಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪ್ರಚಂಡ ಹಾಗೂ ಮತ್ತೊಬ್ಬ ಹಿರಿಯ ಮುಖಂಡ ಮಾಧವ್ ಕುಮಾರ್ ನೇಪಾಳ ಅವರು ಆಗ್ರಹಿಸುವ ಮೂಲಕ ಮತ್ತೆ ಭಿನ್ನಮತ ತೀವ್ರ ಸ್ವರೂಪ ಪಡೆದಿತ್ತು. ಭಿನ್ನಮತೀಯ ನಾಯಕರು ಸರ್ಕಾರವನ್ನು ಉರುಳಿಸುವ ಸಂಚು ಮಾಡಿದ್ದಾರೆ ಎಂದು ಪ್ರಧಾನಿ ಆಪಾದಿಸಿದ್ದರು.

ಶನಿವಾರ ಪಕ್ಷದ ಕಾರ್ಯಾಧ್ಯಕ್ಷ ಪ್ರಚಂಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ, ಪಕ್ಷ ಪಡೆಯುವ ಸುಳಿವನ್ನು ಓಲಿ ನೀಡಿದ್ದಾರೆ. ಎರಡು ವಾರಗಳ ಬಳಿಕ ಉಭಯ ಮುಖಂಡರು ಪರಸ್ಪರ ಭೇಟಿಯಾಗಿದ್ದರು. ನಾವು ಜತೆಯಾಗಿ ನಡೆಯಲು ಸಾಧ್ಯವಿಲ್ಲ ಎಂದಾದರೆ ನಮ್ಮ ನಮ್ಮ ದಾರಿ ನೋಡಿಕೊಳ್ಳೋಣ ಎಂದು ಪ್ರಧಾನಿ ಈ ಸಭೆಯಲ್ಲಿ ಹೇಳಿದ್ದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಹಾಲಿ ವಿವಾದ ಬಗೆಹರಿಸುವ ಸಲುವಾಗಿ ಪಕ್ಷದ ಸೆಂಟ್ರಲ್ ಸೆಕ್ರೇಟ್ರಿಯೇಟ್ ಸಭೆ ಕರೆಯುವಂತೆ ಪ್ರಚಂಡ ಮಾಡಿಕೊಂಡ ಮನವಿಯನ್ನೂ ಪ್ರಧಾನಿ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News