×
Ad

ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸ್ಥಳಕ್ಕೆ ಪೇಜಾವರ ಶ್ರೀ ಭೇಟಿ

Update: 2020-11-02 17:11 IST

ಉಡುಪಿ, ನ.2: ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದ ರಲ್ಲದೇ ಬಳಿಕ ರಾಮಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಭರದಿಂದ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಪೇಜಾವರಶ್ರೀಗಳು ಮಂದಿನ ನಿರ್ಮಾಣ ಮೇಲ್ವಿಚಾರಕರಿಂದ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಅಯೋದ್ಯೆ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಾಲಯಕ್ಕೂ ಶ್ರೀಗಳು ಭೇಟಿ ನೀಡಿದರು.

ಕಳೆದ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾ ಜನ್ಮಭೂಮಿಯಲ್ಲಿ ಭೂಮಿ ಪೂಜನಾ ನಡೆಸಿದಾಗ, ನೀಲಾವರದಲ್ಲಿ ಚಾತು ರ್ಮಾಸ್ಯ ವ್ರತದಲ್ಲಿದ್ದ ಪೇಜಾವರ ಶ್ರೀಗಳು ಕಾಯರ್ಕ್ರಮದಲ್ಲಿ ಭಾಗವಹಿ ಸಲಾಗಿರಲಿಲ್ಲ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಅವರು ಇದೀಗ ಅಯೋಧ್ಯೆಗೆ ತೆರಳಿದ್ದು, ರವಿವಾರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ ನಂತರ ಜನ್ಮಭೂಮಿಗೆ ಭೇಟಿ ಕೊಟ್ಟರು. ಮೂಲ ರಾಮನ ಸ್ಥಳಕ್ಕೆ ಯತಿ ಪ್ರಣಾಮ ಭೂಮಿ ಪೂಜನ ನಡೆಸಿದರು. ಶ್ರೀರಾಮನ ಮೂಲ ವಿಗ್ರಹವಿದ್ದ ಜಾಗಕ್ಕೆ ಪೇಜಾವರ ಶ್ರೀಗಳು ನಮಸ್ಕರಿಸಿದರು. ಬಳಿಕ ರಾಮ ಮಂದಿರದ ದರ್ಶನ ಪಡೆದರು. ನಂತರ ಉತ್ಖನನದ ವೇಳೆ ಸಿಕ್ಕಿದ ಹಳೆಯ ಮಂದಿರದ ಶಿಲೆ, ಶಿಲಾಸ್ತಂಭ ಗಳನ್ನು, ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸಿದರು. ಅಲ್ಲಿನ ಕನಕ ಭವನ ಹಾಗೂ ಹನುಮಾನ್ ಗಡಿ ದರ್ಶನವನ್ನೂ ಪಡೆದ ಪೇಜಾವರ ಶ್ರೀಗಳು, ರಾಮ ದೇವರ ಮಂಗಳಾರತಿ ನೋಡಿ, ದೇವರ ಶಯನೋತ್ಸವ ಮುಗಿಸಿ, ಪೇಜಾವರ ಮಠದ ಮಧ್ವಾಶ್ರಮಕ್ಕೆ ಮರಳಿದರು.

ಅಯೋಧ್ಯೆಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತಿಳಿಸಿದ ಪೇಜಾವರ ಶ್ರೀಗಳು, ಶ್ರೀರಾಮಚಂದ್ರನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ್ದೇವೆ. ಭೂಮಿಯ ಸಮತಟ್ಟು ಕಾರ್ಯ ಪ್ರಾರಂಭವಾಗಿದೆ. ಅಕ್ಕಪಕ್ಕದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಡೆ ಯುತ್ತಿದೆ. ರಾಮಜನ್ಮಭೂಮಿ ಯಲ್ಲಿ ಬೃಹತ್ ಮಂದಿರ ನಿರ್ಮಾಣವಾಗಲಿರುವುದರಿಂದ ಭೂಮಿಯ ಧಾರಣಾ ಸಾಮರ್ಥ್ಯವೇನು? ಮಣ್ಣಿನ ಗುಣವೇನು? ಎಂಬುದನ್ನು ಪರೀಕ್ಷಿಸುವ ಕಾರ್ಯ ನಡೆಯುತ್ತಲೇ ಇದೆ ಎಂದು ವಿವರಿಸಿದರು.

ಈಗಾಗಲೇ ಕೆತ್ತನೆ ಕಾರ್ಯ ಪೂರ್ಣಗೊಳಿಸಿ, ಪೇರಿಸಿಡಲಾದ ಶಿಲಾಸ್ತಂಭ ಗಳನ್ನು ಸ್ಥಳಾಂತರಿಸುವ ಕೆಲಸವೂ ಪ್ರಾರಂಭವಾಗಿದೆ ಎಂದವರು ಹೇಳಿದರು. ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ರಾಯ್, ದಿನೇಶ್ಚಂದ್ರ, ಅನೂಪ್ ಮಿಶ್ರಾ ಅವರು ಪೇಜಾವರ ಶ್ರೀಗಳಿಗೆ ಕಾಮಗಾರಿಗಳ ಮಾಹಿತಿ ನೀಡಿದರು. ಈ ವೇಳೆ ಪೇಜಾವರ ಶ್ರೀಗಳ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಭಟ್ ಮತ್ತು ಕೃಷ್ಣ ಭಟ್ ಜೊತೆಗಿದ್ದರು.

ಜ.15ರಿಂದ ಅಭಿಯಾನ:  ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕುರಿತು ಮಕರ ಸಂಕ್ರಾಂತಿಯ ಮರುದಿನದಿಂದ 45ದಿನಗಳ ಕಾಲ ದೇಶಾದ್ಯಂತ ಅಭಿಯಾನ ನಡೆಸಲು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ರವಿವಾರ ನಡೆದ ಟ್ರಸ್ಟ್‌ನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಮುಂಬಯಿಯ ಎಲ್‌ಎಂಡ್‌ಟಿ ಕಂಪೆನಿ ಹಾಗೂ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗಳು ಮಂದಿರ ನಿರ್ಮಿಸುವ ಗುತ್ತಿಗೆಯನ್ನು ಪಡೆದಿವೆ.ಈ ಸಭೆಯಲ್ಲಿ ಉಳಿದ ಟ್ರಸ್ಟಿಗಳೊಂದಿಗೆ ಪೇಜಾವರಶ್ರೀಗಳೂ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News