×
Ad

ಮಂಗಳೂರು ಮನಪಾದಲ್ಲಿ ದೂರು ಪೆಟ್ಟಿಗೆ ಅಳವಡಿಕೆ

Update: 2020-11-02 17:55 IST

ಮಂಗಳೂರು, ನ. 2: ನೀರು ಬಂದಿಲ್ಲ, ರಸ್ತೆ ಸರಿಯಿಲ್ಲ, ಕಸದ ರಾಶಿ ಬಿದ್ದಿದೆ..., ಹೀಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾ ಒಂದಲ್ಲೊಂದು ಸಮಸ್ಯೆ, ದೂರು, ದುಮ್ಮಾನ ಇದ್ದದ್ದೆ. ಜನರು ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಫೋನ್ ಕರೆಯ ಮೂಲಕವೋ, ನೇರವಾಗಿಯೋ ಈವರೆಗೆ ಹೇಳಿಕೊಳ್ಳುತ್ತಿದ್ದರು. ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದರೆ, ಇನ್ನು ಕೆಲವು ಹಾಗೇ ಜೀವಂತವಾಗಿದೆ.

ಸಮಸ್ಯೆಗೆ ಪರಿಹಾರ ಸಿಕ್ಕಿದ ಕುಶಿ ಒಂದೆಡೆಯಾದರೆ, ಇನ್ನೂ ಅವು ಜೀವಂತವಿರುವ ಕಾರಣ ದೂರು ನೀಡಿದವರು ರೋಸಿ ಹೋಗಿದ್ದಾರೆ. ಇದನ್ನು ಮನಗಂಡ ಮನಪಾ ಆಡಳಿತವು ‘ನಿಮ್ಮ ಸಮಸ್ಯೆಯನ್ನು ಮೇಯರ್ ಮತ್ತು ಆಯುಕ್ತರಿಗೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಿ’ಎಂದು ಘೋಷಿಸಿದ್ದಾರಲ್ಲದೆ, ಪಾಲಿಕೆಯ ಕಚೇರಿ ಮತ್ತು ಸುರತ್ಕಲ್‌ನ ಉಪಕಚೇರಿಯಲ್ಲಿ ‘ದೂರು ಪೆಟ್ಟಿಗೆ’ ಅಳವಡಿಸಿಕೊಂಡಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನುಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಕಾರ್ಪೋರೇಟರ್‌ಗಳಲ್ಲಿ ತಿಳಿಸಿದ್ದರೂ, ಯಾವುದೇ ಪರಿಹಾರ ಸಿಗದಿದ್ದರೆ ಅಂತಹ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆದು ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ದೂರು ಪೆಟ್ಟಿಗೆಗೆ ಹಾಕಬಹುದು. ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟವರು ಲಂಚದ ಬೇಡಿಕೆ ಅಥವಾ ಇತರ ಸಮಸ್ಯೆ ಮಾಡಿದ್ದಲ್ಲಿಯೂ ದೂರು ಪೆಟ್ಟಿಗೆಯೊಳಗೆ ಬರೆದು ಹಾಕ ಬಹುದು. ಅಂದಹಾಗೆ, ಸಾರ್ವಜನಿಕರು ಈ ದೂರು ಪೆಟ್ಟಿಗೆಗಳಿಗೆ ಹಾಕಲಾದ ದೂರುಗಳನ್ನು ಸ್ವತಃ ಮೇಯರ್ ಮತ್ತು ಆಯುಕ್ತರು ತೆರೆದು ಓದಲಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.

ಮೇಯರ್ ಮತ್ತು ಆಯುಕ್ತರು ಆಯಾ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆಗೆ ಸೂಚಿಸುತ್ತಾರೆ. ಅಲ್ಲದೆ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಂದಲೇ ದಿನಾಂಕ ನಿಗದಿಪಡಿಸುತ್ತಾರೆ. ಸಮಸ್ಯೆ ನಿವಾರಣೆಯಾದ ಬಳಿಕ ಮೇಯರ್ ಅಥವಾ ಆಯುಕ್ತರು ನೇರವಾಗಿ ಸಂಬಂಧಪಟ್ಟ ವ್ಯಕ್ತಿಗೆ ಕರೆ ಮಾಡಿ ಸಮಸ್ಯೆ ನಿವಾರಣೆಯಾದ ಬಗ್ಗೆಯೂ ತಿಳಿಸಲಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದೇ ಇದರ ಉದ್ದೇಶವಾಗಿದೆ. ಈಗಾಗಲೇ ಅಳವಡಿಸಲಾದ ಪೆಟ್ಟಿಗೆಗೆ ಸಾರ್ವಜನಿಕರು ಸಮಸ್ಯೆಗಳನ್ನು ಬರೆದು ಹಾಕುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ.

-ದಿವಾಕರ ಪಾಂಡೇಶ್ವರ ಮೇಯರ್, ಮಂಗಳೂರು ಮಹಾನಗರ ಪಾಲಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News