×
Ad

ಉಳ್ಳಾಲ ಸಹಿತ ಹಲವು ಪ್ರದೇಶ ಪಾಕಿಸ್ತಾನವಾಗಿದೆ : ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ

Update: 2020-11-02 19:32 IST
 ಪ್ರಭಾಕರ ಭಟ್

ಮಂಗಳೂರು, ನ. 2: ಉಳ್ಳಾಲ ಸಹಿತ ದೇಶದ ಹಲವು ಪ್ರದೇಶವು ಈಗಾಗಲೆ ಪಾಕಿಸ್ತಾನವಾಗಿದೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಗಳೂರು ತಾಲೂಕಿನ ಕಿನ್ಯ ಗ್ರಾಮದ ಕೇಶವ ಶಿಶುಮಂದಿರದಲ್ಲಿ ರವಿವಾರ ನಡೆದ ಗ್ರಾಮ ವಿಕಾಸ ಸಪ್ತಾಹ ಕಾರ್ಯಕ್ರಮದ ‘ದಂಪತಿಗಳ ಸಮಾವೇಶ’ದಲ್ಲಿ ಮಾರ್ಗದರ್ಶಕರಾಗಿ ಪಾಲ್ಗೊಂಡ ಕಲ್ಲಡ್ಕ ಪ್ರಭಾಕರ ಭಟ್ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈಗ  ಈ ಭಾಷಣದ ವೀಡಿಯೊ ಭಾರೀ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

‘ಉಳ್ಳಾಲಕ್ಕೆ ಹೋದರೆ ನಿಮಗೆ ಪಾಕಿಸ್ತಾನವನ್ನು ನೋಡಿದಂತೆ ಆಗುವುದಿಲ್ಲವಾ ? ಉಳ್ಳಾಲ ಪಾಕಿಸ್ತಾನವೇ ಅಲ್ವಾ? ಅದು ಬೇರೆ ಆಗೋಕೆ ಸಾಧ್ಯ ಇದೆಯಾ ? ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿನೂ ಯಾರೂ ಇರಲ್ಲ. ಆ ಮಗು ಸ್ವಾರ್ಥಿಯಾಗುತ್ತದೆ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿಯೂ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆ ಇದೆ. ಕಿನ್ಯಾದಲ್ಲಿ ಕೇಳಿ ಸುತ್ತಲೂ ಯಾರಿದ್ದಾರೆ ಅಂತಾ.. ? ಅಲ್ಲದೆ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ಆವಾಗ ನಮ್ಮ ದೇವಸ್ಥಾನವನ್ನು ಉಳಿಸುವವರು ಯಾರು ? ದೈವಸ್ಥಾನವನ್ನು ಉಳಿಸುವವರು ಯಾರು ? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು ? ಪಾಕಿಸ್ತಾನ ಯಾಕೆ ಆಯಿತು..? ನಮ್ಮವರ ಸಂಖ್ಯೆ ಕಡಿಮೆ ಇತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ನಿರ್ಮಾಣವಾಯಿತು ಎಂದು   ಕಲ್ಲಡ್ಕ ಪ್ರಭಾಕರ ಭಟ್ ಈ ಭಾಷಣದಲ್ಲಿ ಹೇಳುತ್ತಿರುವುದು ವೈರಲ್ ಆಗಿರುವ ವೀಡಿಯೊ ತುಣುಕಿನಲ್ಲಿ ಕಾಣುತ್ತದೆ.

''ಉಳ್ಳಾಲ ಶಾಂತವಾಗಿದೆ. ಇಲ್ಲಿ ಪಾಕಿಸ್ತಾನದ ವಾತಾವರಣವಿಲ್ಲ. ನಾವೆಲ್ಲ ಹಿಂದೂ ಮುಸ್ಲಿಮರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಬಿಜೆಪಿ, ಆರೆಸ್ಸೆಸ್‌ನವರಿಗೆ ಇಲ್ಲಿ ಅಶಾಂತಿ ಸೃಷ್ಟಿಯಾಗಬೇಕು. ಅದಕ್ಕಾಗಿ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.'' - ಈಶ್ವರ ಉಳ್ಳಾಲ, ಮೊಕ್ತೇಸರರು, ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡ್-ಉಳ್ಳಾಲ

''ಇದು ಬಿಜೆಪಿಗರು ಕಲ್ಲಡ್ಕ ಪ್ರಭಾಕರ್ ಭಟ್ ಮೂಲಕ ಹೇಳಿಸುವ ಪ್ರಚೋದನಕಾರಿ ಮಾತಾಗಿದೆ. ಈ ಹೇಳಿಕೆಯ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ನಡೆಸುವ ಹುನ್ನಾರವೂ ಇದಾಗಿದೆ. ಉಳ್ಳಾಲ ಸಹಿತ ಎಲ್ಲೆಡೆ ನಾವೆಲ್ಲ ತುಂಬಾ ಅನ್ಯೋನ್ಯತೆಯಿಂದಿದ್ದೇವೆ. ಅದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಏನಾದರು ಮಾಡಿ ಜನರ ನೆಮ್ಮದಿಯನ್ನು ಹಾಳು ಮಾಡಿ, ಅರಾಜಕತೆ ಸೃಷ್ಟಿಸುವುದು ಅವರ ಕಸುಬಾಗಿದೆ. ಜಿಲ್ಲೆಯ 7 ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿದೆ. ಉಳ್ಳಾಲದಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಇಂತಹ ತಂತ್ರಗಾರಿಕೆ ಮಾಡಲಾ ಗುತ್ತದೆ. ಆದರೆ ಇದರಲ್ಲಿ ಅವರು ಯಶಸ್ವಿ ಆಗಲಾರರು.'' - ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಉಳ್ಳಾಲ ಬ್ಲಾಕ್ 

ಉಳ್ಳಾಲ ಪಾಕಿಸ್ತಾನ ಎಂದು ಹೇಳುತ್ತಾರೆ ಪ್ರಭಾಕರ ಭಟ್  ?.ಅವರ ಹೇಳಿಕೆ ಖಂಡನೀಯವಾಗಿದೆ. ಉಳ್ಳಾಲದಲ್ಲಿ ಎಲ್ಲಾ ಜಾತಿ ಧರ್ಮದ ಜನರಿದ್ದಾರೆ. ಎಲ್ಲಾ ಧರ್ಮದ ಕ್ಷೇತ್ರಗಳೂ ಇವೆ. ಎಲ್ಲರೂ ಅನ್ಯೋನ್ಯತೆ ಯಿಂದ ಬದುಕುತ್ತಿದ್ದಾರೆ. ಇದಕ್ಕೆ ಕಪ್ಪು ಮಸಿ ಬಳಿಯುವ ಅವಶ್ಯಕತೆ ಇಲ್ಲ. ಅಶಾಂತಿ ಸೃಷ್ಟಿಸುವ ಕೆಲಸ ಬೇಕಾಗಿಲ್ಲ.ನಾವು ಶಾಂತಿ ನೆಮ್ಮದಿಯ ವಾತಾವರಣ ಮಾತ್ರ ಬಯಸುತ್ತೇವೆ. - ದಿನೇಶ್ ರೈ, ಮಾಜಿ ಕೌನ್ಸಿಲರ್, ನಗರಸಭೆ ಉಳ್ಳಾಲ


ಪ್ರತಿಕ್ರಿಯೆ ನೀಡದ ಪೊಲೀಸ್ ಅಧಿಕಾರಿಗಳು !

ಕಲ್ಲಡ್ಕ ಪ್ರಭಾಕರ ಭಟ್ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಪೊಲೀಸ್ ಅಧಿಕಾರಿಗಳನ್ನು ‘ವಾರ್ತಾಭಾರತಿ’ ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News