ಗುಜರಾತ್ ಕಸ್ಟಡಿ ಸಾವು ಪ್ರಕರಣ: ನರ್ಮದಾ ನಾಲೆಯಲ್ಲಿ ಮಂಗಳವಾರ ಮತ್ತೆ ಶೋಧ ಕಾರ್ಯಾಚರಣೆ

Update: 2020-11-02 14:59 GMT

ವಡೋದರ, ನ.2: ಕಸ್ಟಡಿ ಸಾವು ಪ್ರಕರಣದಲ್ಲಿ ಮೃತ ವ್ಯಕ್ತಿಯ ಶವಕ್ಕಾಗಿ ಹತ್ತು ದಿನಗಳ ಹಿಂದೆ ವಡೋದರದ ಮೂಲಕ ಹಾದು ಹೋಗಿರುವ ನರ್ಮದಾ ಮುಖ್ಯ ನಾಲೆಯಲ್ಲಿ ಮೊದಲ ಬಾರಿಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದ ರಾಜ್ಯ ಸಿಐಡಿ ಪೊಲೀಸರು ಮಂಗಳವಾರ ಎರಡನೇ ಬಾರಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಿದ್ದಾರೆ. ಕಾರ್ಯಾಚರಣೆಗೆ ಅನುಕೂಲ ಕಲ್ಪಿಸಲು ಸರ್ದಾರ್ ಸರೋವರ ನರ್ಮದಾ ನಿಗಮ ಲಿ.ಸೋಮವಾರ ಮಧ್ಯರಾತ್ರಿಯಿಂದ 24 ಗಂಟೆಗಳ ಅವಧಿಗೆ ನಾಲೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಿದೆ.

 ತೆಲಂಗಾಣದಿಂದ ವಲಸೆ ಬಂದಿದ್ದ ಬಾಬು ಶೇಖ್ ನಿಸಾರ್ (65) 2019,ಡಿ.10ರಂದು ವಡೋದರಾದ ಫತೇಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆಯಾಗಿದ್ದಾರೆಂದು ಆರೋಪಿಸಲಾಗಿದೆ. ನಿಸಾರ್ ಶವವನ್ನು 2019,ಡಿ.10-11ರ ರಾತ್ರಿ ವಿಲೇವಾರಿ ಮಾಡಲಾಗಿತ್ತು ಎಂದು ವರದಿಯಾಗಿದ್ದು,ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಐಡಿ ಪೊಲೀಸರ ತಂಡಗಳು ರವಿವಾರ ವಡೋದರಾ ತಾಲೂಕಿನಲ್ಲಿ ಮಹಿಸಾಗರ ನದಿ ದಂಡೆಗಳಲ್ಲಿಯ ಏಳು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಸುಳಿವು ಪಡೆಯಲು ಪ್ರಯತ್ನಿಸಿದ್ದವು.

ಫತೇಗಂಜ್ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಮಹೇಶ ರಥ್ವಾ ಅವರು ನೀಡಿರುವ ಹೇಳಿಕೆಯ ಕುರಿತು ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ನಿಸಾರ್ ಶವವನ್ನು ವಿಲೇವಾರಿಗೊಳಿಸಲು ಬಳಸಿದ್ದ ಹಲವು ವಾಹನಗಳಲ್ಲಿ ರಥ್ವಾ ಅವರ ಕಾರೂ ಒಂದಾಗಿತ್ತು.

2019,ಡಿ.11ರಂದು ನಸುಕಿನ ಮೂರು ಗಂಟೆಯ ಸುಮಾರಿಗೆ ಆರೋಪಿಗಳು ನಿಸಾರ್ ಶವವನ್ನು ಸುಟ್ಟುಹಾಕಲು ಪೆಟ್ರೋಲ್ ಮತ್ತು ಕಟ್ಟಿಗೆಯನ್ನು ತನ್ನ ಕಾರಿನಲ್ಲಿ ಮಹಿಸಾಗರ ನದಿ ದಂಡೆಗೆ ಸಾಗಿಸಿದ್ದರು ಎಂದು ಆರೋಪಿಗಳಲ್ಲೋರ್ವನಾಗಿರುವ ಕಾನ್‌ಸ್ಟೇಬಲ್ ಪಂಕಜ್ ತನಗೆ ಮಾಹಿತಿ ನೀಡಿದ್ದ ಎಂದು ರಥ್ವಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದರು.

 ಪೊಲೀಸರಿಂದ ರಥ್ವಾ ಹೇಳಿಕೆಯ ನಿರ್ಲಕ್ಷ್ಯವನ್ನು ನಿಸಾರ್ ಪುತ್ರ ಸಲೀಂ ಪ್ರಶ್ನಿಸಿದ ಬಳಿಕ ಸಿಐಡಿ ತಂಡಗಳು ರವಿವಾರ ಗ್ರಾಮಗಳಿಗೆ ಭೇಟಿ ನೀಡಿದ್ದವು.

 ಅ.23ರಂದು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಸಲೀಂ ತನ್ನ ತಂದೆಯ ಶವವನ್ನು ರಹಸ್ಯವಾಗಿ ಸುಟ್ಟುಹಾಕಲಾಗಿದೆ ಎಂಬ ಸುಳಿವು ನೀಡಿದ್ದ ರಥ್ವಾರ ಹೇಳಿಕೆಯನ್ನು ತನ್ನ ವಕೀಲರ ಮೂಲಕ ಪೀಠದ ಗಮನಕ್ಕೆ ತಂದಿದ್ದರು. ಇದಕ್ಕೂ ಮುನ್ನ ಅ.20ರಂದು ಸಿಐಡಿ ಪೊಲೀಸರು ನರ್ಮದಾ ಮುಖ್ಯನಾಲೆಯಲ್ಲಿ ನಿಸಾರ್ ಶವಕ್ಕಾಗಿ ಮೊದಲ ಬಾರಿಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು.

 ‘ನಿಸಾರ್ ಶವಕ್ಕಾಗಿ ನ.3ರಂದು ನಾವು ಮತ್ತೊಮ್ಮೆ ಶೋಧ ಕಾರ್ಯಾಚರಣೆ ನಡೆಸಲಿದ್ದೇವೆ. ಮೊದಲ ಬಾರಿ ಕಾರ್ಯಾಚರಣೆ ಸಂದರ್ಭದಲ್ಲಿ ನಾಲೆಯಲ್ಲಿ ತ್ಯಾಜ್ಯಗಳು ತುಂಬಿಕೊಂಡಿದ್ದರಿಂದ ಶೋಧ ತಂಡಗಳಿಗೆ ತೊಡಕುಂಟಾಗಿತ್ತು. ಈ ಬಾರಿ ಕಾರ್ಯಾಚರಣೆ ಆರಂಭಗೊಳ್ಳುವ ಮುನ್ನ ತ್ಯಾಜ್ಯಗಳನ್ನು ತೆರವುಗೊಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News