ಮಧ್ಯಪ್ರದೇಶ ಉಪ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆ, ಹಲವರಿಗೆ ಗಾಯ

Update: 2020-11-02 17:25 GMT

ಮುಂಬೈ, ನ. 2: ಉಪ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬದನಾವರ್‌ನಲ್ಲಿ ಸೋಮವಾರ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

ತಿಲಾಗಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳು ಅಪರಾಹ್ನ 1 ಗಂಟೆಗೆ ಮಖಾಮುಖಿಯಾದ ಬಳಿಕ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಈ ವಾಗ್ವಾದ ಘರ್ಷಣೆಗೆ ತಿರುಗಿತು ಎಂದು ಪೊಲೀಸ್ ಅಧೀಕ್ಷಕ ಆದಿತ್ಯಪ್ರತಾಪ್ ಸಿಂಗ್ ಹೇಳಿದ್ದಾರೆ. ‘‘ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. 7 ಮಂದಿಯ ವಿರುದ್ಧ ಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರನ್ನು ಗುರುತಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಗುರುತಿಸಲಾದ ನಾಲ್ವರು ಕಾಂಗ್ರೆಸ್‌ನ ಪದಾಧಿಕಾರಿಗಳು. ಆದರೆ, ಪೊಲೀಸರು ಇವರನ್ನು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ಕಾಂಗ್ರೆಸ್‌ನ ಮಧ್ಯಪ್ರದೇಶದ ಕಾರ್ಯದರ್ಶಿ ಕುಲದೀಪ್ ಸಿಂಗ್ ಬುಂದೇಲಾ ಆರೋಪಿಸಿದ್ದಾರೆ.

‘‘ಬಿಜೆಪಿ ಕಾರ್ಯಕರ್ತರು ಹಿಂಸಾಚಾರ ಆರಂಭಿಸಿದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ. ಈ ಆರೋಪವನ್ನು ಬಿಜೆಪಿ ನಾಯಕ ಗೋವಿಂದ ಮಾಲೂ ನಿರಾಕರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದರು ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News