ಕಾರು ಢಿಕ್ಕಿ: ಮಹಿಳೆ, ಬಾಲಕಿ ಸಾವು
Update: 2020-11-02 22:43 IST
ಪುತ್ತೂರು : ಕಾರು ಢಿಕ್ಕಿಯಾಗಿ ಬಾಲಕಿ ಮತ್ತು ಮಹಿಳೆ ಮೃತಪಟ್ಟು ಇನ್ನೋರ್ವ ಬಾಲಕಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಮದ್ಯಾಹ್ನ ಪುತ್ತೂರು ನಗರದ ದರ್ಬೆ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮೃತ ಬಾಲಕಿ ಸ್ವಾತಿ(9) ಮತ್ತು ಮಹಿಳೆ ಗೀತಾ(44) ಇವರಿಬ್ಬರೂ ಸ್ಥಳೀಯರಾಗಿದ್ದು, ದರ್ಬೆ ವೃತ್ತದ ಬಳಿಯಿರುವ ಸಭಾಭವನದಿಂದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಇನ್ನೋರ್ವ ಬಾಲಕಿ ಅನನ್ಯ(6) ಗಂಭೀರ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಸುಳ್ಯದತ್ತ ಚಲಿಸುತ್ತಿದ್ದ ಸ್ವಿಫ್ಟ್ ಕಾರು ಮತ್ತು ಇನ್ನೊಂದು ಕಾರುಗಳ ನಡುವೆ ಢಿಕ್ಕಿಯಾಗಿದ್ದು, ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.