×
Ad

ಉಳ್ಳಾಲ ಪಾಕಿಸ್ತಾನವೇ ಅಲ್ವಾ? ಎಂಬ ಪ್ರಭಾಕರ ಭಟ್ ಹೇಳಿಕೆಗೆ ಬಿದ್ದು ಬಿದ್ದು ನಕ್ಕ ಜನ!

Update: 2020-11-03 11:41 IST

ಮಂಗಳೂರು, ನ.3: ‘‘ಉಳ್ಳಾಲಕ್ಕೆ ಹೋದರೆ ನಿಮಗೆ ಪಾಕಿಸ್ತಾನವನ್ನು ನೋಡಿದಂತೆ ಆಗುವುದಿಲ್ಲವಾ? ಉಳ್ಳಾಲ ಪಾಕಿಸ್ತಾನವೇ ಅಲ್ವಾ?’’ ಎಂಬ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್  ಹೇಳಿಕೆ ತಮಾಷೆ, ಮೀಮ್  ಹಾಗೂ  ಜೋಕುಗಳಿಗೆ  ವಸ್ತುವಾಗಿ ನಗೆಪಾಟಲಿಗೀಡಾಗಿದೆ. 

 ಭಟ್‌ರ ಈ  ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ಮೀಮ್‌ಗಳು ಹರಿದಾಡುತ್ತಿದ್ದು, ಜನರು ಬಿದ್ದು ಬಿದ್ದು ನಗುವಂತಾಗಿದೆ. 
‘ಉಳ್ಳಾಲಕ್ಕೆ ಹೋಗಲು ಬಸ್ ಟಿಕೆಟ್ ಇದ್ದರೆ ಸಾಲದು, ಇನ್ನು ಮುಂದೆ ಪಾಟ್‌ಪೋರ್ಟ್ ಕೂಡಾ ಬೇಕು’, ‘ಪಾಕಿಸ್ತಾನದ ಹೆಸರು ಹೇಳಿ ಬಿಜೆಪಿ ಗೆದ್ದಿತು, ಪಾಕಿಸ್ತಾನದ ಹೆಸರು ಹೇಳಿ ಮಾಧ್ಯಮ ಗೆದ್ದಿತು. ಆದರೆ ಪಾಕಿಸ್ತಾನದ ಹೆಸರೇಳಿ ಭಟ್ಟ ಗೆಲ್ಲಲೇ ಇಲ್ಲ’, ‘ಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ಸಿಟಿಬಸ್ಸುಗಳನ್ನೆಲ್ಲ ಇನ್ನು ಮುಂದೆ ಅಂತಾರಾಷ್ಟ್ರೀಯ ಸಾರಿಗೆ ಎಂದು ಘೋಷಿಸಬೇಕು’ ಇತ್ಯಾದಿ ಪೋಸ್ಟ್‌ಗಳ ಜೊತೆಗೆ ಉಳ್ಳಾಲಕ್ಕೆ ತೆರಳುವ ಬಸ್ಸಿನ ಮುಂಭಾಗಕ್ಕೆ ‘ಸ್ಟೇಟ್ ಬ್ಯಾಂಕ್ ಟು ಪಾಕಿಸ್ತಾನ್’ ಎಂದು ಎಡಿಟ್ ಮಾಡಿರುವ ಚಿತ್ರ, ಉಳ್ಳಾಲ ಎಂದು ಬರೆದಿರುವ ಪಾಸ್‌ಪೋರ್ಟ್, ‘ಉಳ್ಳಾಲ ಎಕ್ಸ್‌ಪ್ರೆಸ್’ ಎಂದು ಬರೆದಿರುವ ವಿಮಾನ ಚಿತ್ರವಿರುವ ಮೀಮ್‌ನಲ್ಲಿ ‘ಮೊದಲ ವಿಮಾನ ನೇತ್ರಾವತಿ ನದಿಯನ್ನು ದಾಟುತ್ತಿರುವುದು’ ಎಂದೆಲ್ಲ ವಂಗ್ಯಭರಿತ ಫೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಉಳ್ಳಾಲ ಕುರಿತ ಪ್ರಭಾಕರ ಭಟ್ ಅವರ ಹೇಳಿಕೆ ‘ಪ್ರಚೋದನಕಾರಿ’ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ಜೋಕ್ ಆಗಿ ಬಿಟ್ಟಿದೆ. 

ಕಿನ್ಯ ಗ್ರಾಮದ ಕೇಶವ ಶಿಶುಮಂದಿರದಲ್ಲಿ ರವಿವಾರ ನಡೆದ ಗ್ರಾಮ ವಿಕಾಸ ಸಪ್ತಾಹ ಕಾರ್ಯಕ್ರಮದ ‘ದಂಪತಿಗಳ ಸಮಾವೇಶ’ದಲ್ಲಿ ಮಾರ್ಗದರ್ಶಕರಾಗಿ ಪಾಲ್ಗೊಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದರ ವೀಡಿಯೊ ತುಣುಕು ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News