ಎ.ಜೆ. ಆಸ್ಪತ್ರೆಯಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ರೋಗಿಗೆ ಯಶಸ್ವಿ ರೋಬೊಟ್ ಶಸ್ತ್ರಚಿಕಿತ್ಸೆ

Update: 2020-11-03 09:58 GMT

ಮಂಗಳೂರು, ನ.3: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅತೀ ಸ್ಥೂಲಕಾಯದ ದೊಡ್ಡ ಕರುಳಿನ ಕ್ಯಾನ್ಸರ್ ರೋಗಿಗೆ ಯಶಸ್ವಿ ರೋಬೊಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ದೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 118 ಕೆಜಿ ತೂಕದ ಮಹಿಳೆಯಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಪತ್ತೆಹಚ್ಚಲಾಗಿತ್ತು. ಅವರ ಸ್ಥೂಲಕಾಯತೆ ಮತ್ತು ಕಿಡ್ನಿ ಸಮಸ್ಯೆಗಳಿದ್ದ ಕಾರಣ ಶಸ್ತ್ರಕ್ರಿಯೆಯಿಂದ ಹೆಚ್ಚಿನ ಪ್ರಾಣಪಾಯವಾಗುವ ಸಾಧ್ಯತೆಗಳಿದ್ದವು. ಎ.ಜೆ. ಆಸ್ಪತ್ರೆಯ ನುರಿತ ಗ್ಯಾಸ್ಟ್ರೋ ಸರ್ಜನ್ ಡಾ.ರೊಹನ್ ಶೆಟ್ಟಿ ಮತ್ತು ಡಾ.ಅಶ್ವಿನ್ ಆಳ್ವ, ಅರಿವಳಿಕೆ ತಜ್ಞ ಡಾ.ಹರೀಶ್, ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ಶಿವಪ್ರಸಾದ್ ಬಿ, ನೆಪ್ರಾಲಜಿಸ್ಟ್ ಡಾ. ರಾಘವೇಂದ್ರ ನಾಯಕ್ ಹಾಗೂ ಕಾರ್ಡಿಯೊಲಜಿಸ್ಟ್ ಡಾ.ಪುರುಷೋತ್ತಮ್ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡವು ಈ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ರೋಗಿಯು ಯಾವುದೇ ತೊಂದರೆಗಳಿಲ್ಲದೆ ಕೇವಲ 7 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ರೋಬೊಟಿಕ್ ಶಸ್ತ್ರಚಿಕಿತ್ಸೆಗಳು ವೈದ್ಯಕೀಯ ವಿಜ್ಞಾನದ ಇತ್ತೀಚಿನ ಆವಿಷ್ಕಾರವಾಗಿದ್ದು, ಬೇಗನೆ ಗುಣವಾಗುವ, ಕಡಿಮೆ ಅಸ್ವಸ್ಥತೆಗಳ, ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸಹಾಯಕವಾಗಿದೆ. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರಾವಳಿ ಕರ್ನಾಟಕದ ಮೊದಲ 4ನೇ ತಲೆಮಾರಿನ ರೋಬೊಟ್ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಹಾಗೂ ಕೆಲವು ತಿಂಗಳುಗಳಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News