ಆಸ್ಟ್ರೇಲಿಯ ಸರಣಿಗೆ ಮೊದಲು ಫಾರ್ಮ್ ಕಂಡುಕೊಂಡ ಅಜಿಂಕ್ಯ ರಹಾನೆ

Update: 2020-11-03 12:39 GMT

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಮವಾರ ನಡೆದಿರುವ ಐಪಿಎಲ್ ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸಿದ್ದ ಅಜಿಂಕ್ಯ ರಹಾನೆ ತನ್ನ ಮೊದಲಿನ ಫಾರ್ಮ್ ಗೆ ಮರಳಿದ್ದರು. ಆಸ್ಟ್ರೇಲಿಯ ವಿರುದ್ಧ ಸರಣಿಗೆ ಮೊದಲು ರಹಾನೆ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತುಷ್ಟರಾಗಿದ್ದಾರೆ.

ಚೊಚ್ಚಲ ಐಪಿಎಲ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಡೆಲ್ಲಿ ತಂಡಕ್ಕೆ ಅಜಿಂಕ್ಯ ರಹಾನೆ ಮೊದಲ ಆದ್ಯತೆಯ ಆಟಗಾರನಲ್ಲ ಎಂದು ಟೂರ್ನಮೆಂಟ್ ಆರಂಭಕ್ಕೆಮೊದಲೇ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದರು.

ರಹಾನೆ ಡೆಲ್ಲಿಯ ಮೊದಲ 6 ಪಂದ್ಯಗಳಿಂದ ಹೊರಗುಳಿದಿದ್ದರು. ಕೊನೆಗೂ ಅವರಿಗೆ ಅವಕಾಶ ಲಭಿಸಿತ್ತು. ಆದರೆ ಅವರು ಅವಕಾಶವನ್ನು ತಕ್ಷಣವೇ ಸದುಪಯೋಗಪಡಿಸಿಕೊಳ್ಳಲಿಲ್ಲ. ಮೊದಲ 5 ಪಂದ್ಯಗಳಲ್ಲಿ ಅವರು ಕೇವಲ 51 ರನ್ ಗಳಿಸಿದ್ದರು.

ಆರಂಭಿಕ ಆಟಗಾರನಾಗಿ ಪರದಾಟ ನಡೆಸಿದ್ದ ರಹಾನೆ ಮೂರನೇ ಕ್ರಮಾಂಕಕ್ಕೆ ವಾಪಸಾಗಿದ್ದರು. ಕೊಹ್ಲಿ ನೇತೃತ್ವದ ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ರಹಾನೆ 46 ಎಸೆತಗಳಲ್ಲಿ 60 ರನ್ ಗಳಿಸಿ ಆರು ವಿಕೆಟ್ ಅಂತರದ ಗೆಲುವಿಗೆ ನೆರವಾಗಿದ್ದರು.

“ನಾನು ಇಲ್ಲಿಗೆ ಬಂದಾಗ ಮೂರನೇ ಕ್ರಮಾಂಕದಲ್ಲಿ ಆಡುವಂತೆ ರಿಕಿ(ಪಾಂಟಿಂಗ್)ನನಗೆ ಹೇಳಿದರು. ಬ್ಯಾಟಿಂಗ್ ಮಾಡಲು ಈ ಕ್ರ ಮಾಂಕವು ಉತ್ತಮವಾಗಿರುತ್ತದೆ’’ಎಂದು ಡಿಸೆಂಬರ್ 17ರಿಂದ ಆಸ್ಟ್ರೇಲಿಯದಲ್ಲಿ ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಉಪ ನಾಯಕನಾಗಿ ಕಾರ್ಯನಿರ್ವಹಿಸಲಿರುವ ರಹಾನೆ ಹೇಳಿದರು.

“ನಾನು 60 ರನ್ ಗಳಿಸಿ ಔಟಾಗಿದ್ದಕ್ಕೆ ಬೇಸರವಾಗಿದೆ.  ನಾನು ಪಂದ್ಯವನ್ನು ಮುಗಿಸಲು ಬಯಸಿದ್ದೆ. ಅಂತಿಮವಾಗಿ ನಾವು ಪಂದ್ಯವನ್ನು ಜಯಿಸಿ ಪ್ಲೇ ಆಫ್ ಗೆ ಪ್ರವೇಶಿಸಿದ್ದಕ್ಕೆ ಸಂತೋಷವಾಗುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News