ಕೊರೋನ ಸೋಂಕು: ಸಕ್ರಿಯ, ಚೇತರಿಕೆ ನಡುವಿನ ಅಂತರ 7 ಮಿಲಿಯನ್‌ಗೆ ಹೆಚ್ಚಳ
ಹೊಸದಿಲ್ಲಿ, ನ.3: ದೇಶದಲ್ಲಿ ಕೊರೋನ ಸೋಂಕಿನ ಸಕ್ರಿಯ ಮತ್ತು ಚೇತರಿಕೆ ಪ್ರಮಾಣದ ನಡುವಿನ ಅಂತರ 7 ಮಿಲಿಯನ್ ಗಡಿ ದಾಟಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಹೇಳಿದೆ. ದೇಶದ ಒಟ್ಟು ಕೊರೋನ ಸೋಂಕಿನ ಪ್ರಮಾಣದಲ್ಲಿ ಚೇತರಿಕೆ ಪ್ರಕರಣ, ಸಕ್ರಿಯ ಪ್ರಕರಣ ಮತ್ತು ಸಾವಿನ ಪ್ರಕರಣ ಅನುಕ್ರಮವಾಗಿ 91.96 ಶೇ., 6.55 ಶೇ. ಮತ್ತು 1.49 ಶೇ. ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮಂಗಳವಾರ ಬೆಳಗ್ಗಿನವರೆಗಿನ ಮಾಹಿತಿಯಂತೆ ಕಳೆದ 24 ಗಂಟೆಯ ಅವಧಿಯಲ್ಲಿ 58,323 ಮಂದಿ ಚೇತರಿಸಿಕೊಂಡಿದ್ದು ಸೋಂಕಿನ ಸಕ್ರಿಯ ಪ್ರಮಾಣ 5,41,405ಕ್ಕೆ ಇಳಿದಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 38,310 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 82,67,623 ಕ್ಕೇರಿದೆ. ಇದೇ ಅವಧಿಯಲ್ಲಿ 490 ಸಾವಿನ ಪ್ರಕರಣ ದಾಖಲಾಗಿದ್ದು ಮೃತಪಟ್ಟವರ ಒಟ್ಟು ಸಂಖ್ಯೆ 1,23,097ಕ್ಕೇರಿದೆ. ಅಕ್ಟೋಬರ್ 20ರಿಂದ ನವೆಂಬರ್ 3ರವರೆಗಿನ ಅವಧಿಯಲ್ಲಿ ಚೇತರಿಕೆ ಪ್ರಕರಣ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವನ್ನು ನಕ್ಷೆಯ ಮೂಲಕ ಇಲಾಖೆ ಪ್ರಕಟಿಸಿದೆ.
ಅಕ್ಟೋಬರ್ 20ರಂದು ಸಕ್ರಿಯ ಪ್ರಕರಣ 7,48,538 ಆಗಿದ್ದರೆ ನವೆಂಬರ್ 3ರಂದು ಇದು 5,41,405ಕ್ಕೆ ಇಳಿದಿರುವುದನ್ನು ನಕ್ಷೆಯಲ್ಲಿ ಗಮನಿಸಬಹುದು. ವಿಶ್ವದಲ್ಲಿ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿರುವ ದೇಶಗಳಲ್ಲಿ ಭಾರತ ದ್ವಿತೀಯ (ಅಮೆರಿಕ ಪ್ರಥಮ) ಸ್ಥಾನದಲ್ಲಿದ್ದರೆ, ಚೇತರಿಕೆ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಇಲಾಖೆ ತಿಳಿಸಿದೆ.