×
Ad

ಭಾರತದ ಸಂವಿಧಾನ ಅಪಾಯದಲ್ಲಿದೆ: ಸುಂದರ್ ಮಾಸ್ತರ್

Update: 2020-11-03 19:49 IST

ಉಡುಪಿ, ನ.3: ಭಾರತದಲ್ಲಿ ಸಂವಿಧಾನ ಅಪಾಯದಲ್ಲಿದೆ. ಆದುದರಿಂದ ನಾವೆಲ್ಲರೂ ಸಂವಿಧಾನದ ರಕ್ಷಣೆ ಮಾಡಿ ಈ ದೇಶದ ಏಕತೆಯನ್ನು ಉಳಿ ಸುವ ಕೆಲಸ ಮಾಡಬೇಕು ಎಂದು ದಸಂಸ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಕಾಪು ತಾಲೂಕು ಸಮಿತಿ ವತಿಯಿಂದ ರವಿವಾರ ಆಯೋಜಿಸಲಾದ ಕಾನೂನು ಮಾಹಿತಿ, ಕಂದಾಯ ಮಾಹಿತಿ ಹಾಗೂ ಗ್ರಾಪಂನಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಪಾಂಗಾಳ ಗ್ರಾಮ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು.

ಕಾನೂನು ಮಾಹಿತಿ ನೀಡಿದ ಕಾಪು ಪೋಲೀಸ್ ಠಾಣೆಯ ಉಪನೀರೀಕ್ಷಕ ರಾಜಶೇಖರ ಸಾಗನೂರು, ನಮ್ಮ ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಧರ್ಮಗ್ರಂಥ. ಈ ದೇಶದ ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆಯೇ ನಡೆದುಕೊಳ್ಳ ಬೇಕು. ದಲಿತರು ದೂರು ನೀಡಲು ಠಾಣೆಗೆ ಬರುವುದೇ ಅಪರೂಪ. ಅಂಥದ್ದರಲ್ಲಿ ಸುಳ್ಳು ದೂರು ಕೊಡುತ್ತಾರೆ ಎಂಬ ಆರೋಪ ದೂರದ ಮಾತು ಎಂದು ತಿಳಿಸಿದರು.

ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ, ಡಿಸಿ ಮನ್ನಾ ಭೂಮಿ, ಪಿಟಿಸಿಎಲ್ ಕಾಯಿದೆ, ಕಂದಾಯ ಇಲಾಖೆಯಿಂದ ದಲಿತರಿಗೆ ಸಿಗುವ ವಿವಿಧ ಸಹಾಯಧನಗಳು, ಪಿಂಚಣಿಗಳು ಮತ್ತು ಖಾತೆ ಬದಲಾವಯಾಗದೆ ಭೂಮಿ ಪೂರ್ವಜರ ಹೆಸರಲ್ಲೇ ಇರು ವುದರಿಂದ ಯಾವುದೇ ಸರಕಾರಿ ಸೌಲಭ್ಯಗಳಿಂದ ವಂಚಿತರಾದ ಕುಟುಂಬಗಳಿಗೆ ಖುದ್ದು ಸ್ಥಳಕ್ಕೆ ಬಂದು ಅದಾಲತ್ ನಡೆಸಿ ಮಹಜರು ಮಾಡಿ ಖಾತೆ ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಾವು ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಬಾಬಾಸಾಹೇಬರು ನೀಡಿದ ಮೀಸಲಾತಿಯಿಂದಾಗಿ ನಾವು ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದೇವೆ. ಸವಲತ್ತುಗಳನ್ನು ಪಡೆದ ನಾವುಗಳು ನಮ್ಮ ಸ್ವಲ್ಪ ಆದಾಯವನ್ನಾದರೂ ನಮ್ಮ ಸಮಾಜದ ಸೇವೆಗಾಗಿ ಮೀಸಲಿಡಬೇಕು. ಆ ಮೂಲಕ ಅಂಬೇಡ್ಕರ್ ರ ಋಣವನ್ನು ತೀರಿಸಬೇಕು ಎಂದರು.

ಇನ್ನಂಜೆ ಗ್ರಾಪಂ ಪಿಡಿಓ ರಾಜೇಶ್ ಶೆಣೈ, ಪಂಚಾಯತ್‌ನಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ತಾಪಂ  ಸದಸ್ಯ ರಾಜೇಶ್ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯ ನಾಗೇಶ್ ಭಂಡಾರಿ ಮಾತನಾಡಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್ ಬಾಳ್ಕುದ್ರು, ಅಣ್ಣಪ್ಪನಕ್ರೆ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ರಾಜೇಂದ್ರ ಬೆಳ್ಳೆ, ಜಿಲ್ಲಾ ದಲಿತ ಕಲಾಮಂಡಳಿ ಸಂಚಾಲಕ ರವೀಂದ್ರ ಬಂಟಕಲ್ಲು, ತಾಲೂಕು ಸಂಚಾಲಕ ಶಂಕರ್‌ದಾಸ್ ಚೆಂಡ್ಕಳ, ವಿಠಲ್ ಉಚ್ಚಿಲ, ಶ್ರೀನಿವಾಸ ವಡ್ಡರ್ಸೆ, ಪಾಂಗಾಳ ಗ್ರಾಮ ಶಾಖೆಯ ಸಂಚಾಲಕ ಸುಧೀರ್ ಉಪಸ್ಥಿತರಿದ್ದರು. ದಸಂಸ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲ ಎಸ್.ಎಸ್.ಪ್ರಸಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News