ಕಾರ್ಕಳ ತಾಲೂಕು ಅಕ್ಷರ ದಾಸೋಹ ನೌಕರರ ಸಮಾವೇಶ
ಕಾರ್ಕಳ, ನ.3: ಅಕ್ಷರದಾಸೋಹ ನೌಕರರನ್ನು ಖಾಯಂಗೊಳಿಸಿ, ಸರಕಾರಿ ನೌಕರರಾಗಿ ಪರಿಗಣಿಸಬೇಕು. ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ನ.26 ರಂದು ಅಕ್ಷರದಾಸೋಹ ನೌಕರರು ಮುಷ್ಕರ ಮಾಡಲಿರುವರು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.
ಅಕ್ಷರದಾಸೋಹ ನೌಕರರ ಸಂಘ ಕಾರ್ಕಳ ತಾಲೂಕು ಘಟಕ ವತಿಯಿಂದ ಕಾರ್ಕಳ ಪೆರ್ವಾಜೆ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾದ ಅಕ್ಷರ ದಾಸೋಹ ನೌಕರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಿಐಟಿಯು ಮುಖಂಡ ಕವಿರಾಜ್ ಮಾತನಾಡಿ, ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಅಕ್ಷರದಾಸೋಹ ನೌಕರರು ನ.9ರಂದು ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿ ಮುಷ್ಕರದ ನೋಟಿಸು ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಮಿಕ ಮುಖಂಡ ನಾಗೇಶ ಆಚಾರ್ಯ ಮಾತನಾಡಿದರು. ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ ಮುಷ್ಕರ ಮಹತ್ವ ತಿಳಿಸಿದರು. ಅಧ್ಯಕ್ಷತೆಯನ್ನು ಬೇಬಿ ಭಂಡಾರಿ ವಹಿಸಿದ್ದರು. ಸುನೀತಾ ಶೆಟ್ಟಿ ಉಪಸ್ಥಿತರಿದ್ದರು. ಸಂಧ್ಯಾ ಗೋಖಲೆ ವಂದಿಸಿದರು.