ಆ್ಯಂಬುಲೆನ್ಸ್‌ನಲ್ಲೇ ಕುಳಿತು ಪಿಎಸ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿ !

Update: 2020-11-03 16:00 GMT

ತಿರುವನಂತಪುರ, ನ, 3: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿ ಯುವತಿಯೋರ್ವರು ಸಾರ್ವಜನಿಕ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯನ್ನು ಮಂಗಳವಾರ ಆ್ಯಂಬುಲೆನ್ಸ್‌ನಲ್ಲೇ ಕುಳಿತು ಬರೆದಿದ್ದಾರೆ.

ಪ್ರಮುಖ ಪರೀಕ್ಷೆ ಎದುರಿಸಲು ಆ್ಯಂಬುಲೆನ್ಸ್ ಸೂಕ್ತ ಸ್ಥಳವಾಗಿರದಿದ್ದರೂ, ಪಿಎಸ್‌ಸಿ ಅಭ್ಯರ್ಥಿ ಗೋಪಿಕಾ ಗೋಪನ್ ಆ್ಯಂಬುಲೆನ್ಸ್‌ನಲ್ಲೇ ಕುಳಿತು ಪರೀಕ್ಷೆ ಬರೆದಿದ್ದಾರೆ. ಕೇರಳ ಲೋಕ ಸೇವಾ ಆಯೋಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪಿಎಸ್‌ಸಿ ಪರೀಕ್ಷೆಗೆ ಗೋಪಿಕಾ ಗೋಪನ್ ಸಿದ್ಧತೆ ನಡೆಸುತ್ತಿದ್ದರು. ಆದರೆ, ಶನಿವಾರ ಅವರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಆದರೆ, ಪರೀಕ್ಷೆಗೆ ಹೇಗಾದರೂ ಹಾಜರಾಗಲೇ ಬೇಕು ಎಂದು ನಿರ್ಧರಿಸಿದ್ದರು.

ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರವಾದ ಇಲ್ಲಿನ ಸರಕಾರಿ ಶಾಲೆಯ ಸಮೀಪ ನಿಲ್ಲಿಸಲಾದ ಆ್ಯಂಬುಲೆನ್ಸ್‌ನ ಒಳಗೆ ಪರೀಕ್ಷೆ ಬರೆಯಲು ಗೋಪಿಕಾ ಗೋಪನ್ ಅವರಿಗೆ ಡೆಸ್ಕ್‌ನ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಿಕಾ ಗೋಪನ್, ಒಮ್ಮೆ ನೀವು ಪರೀಕ್ಷೆ ಬರೆಯಲು ಆರಂಭಿಸಿದರೆ, ಸ್ಥಳ ಅಷ್ಟೇನೂ ಮುಖ್ಯ ಅಂತ ಅನ್ನಿಸುವುದಿಲ್ಲ ಎಂದಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗದಿಂದ ಗೋಪಿಕಾ ಗೋಪನ್ ಅವರಂತೆ ಹಲವು ಅಭ್ಯರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ಪಿಎಸ್‌ಸಿಯ ಈ ಪರೀಕ್ಷೆಯನ್ನು ಜುಲೈಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕೊರೋನ ಪಿಡುಗು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News